ರಾಜ್ಯದ 5 ಜಿಲ್ಲೆಗಳಲ್ಲಿ ಕೊರೋನಾ ಆಬ್ಬರ ಹೆಚ್ಚಳ: ಆತಂಕ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ

ರಾಜ್ಯದ 5 ಜಿಲ್ಲೆಗಳಲ್ಲಿ ಕೊರೋನಾ ಅಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ಬೆಳವಣಿಗೆಗೆ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ 5 ಜಿಲ್ಲೆಗಳಲ್ಲಿ ಕೊರೋನಾ ಅಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ಬೆಳವಣಿಗೆಗೆ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. 

ಕರ್ನಾಟಕ ರಾಜ್ಯದ 5 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದ್ದು, ಇದು ಕಳೆದ 2 ವಾರಗಳಲ್ಲಿ ದೇಶದ ದೈನಂದಿನ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು, ಉತ್ತರ ಕನ್ನಡ, ಚಾಮರಾಜನಗರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗಿರುವ ಕಾರಣ ಈ ಜಿಲ್ಲೆಗಳನ್ನು ಕಳವಳಕಾರಿ ಜಿಲ್ಲೆಗಳೆಂದು ಗುರ್ತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಮಾತನಾಡಿ, ದೇಶದಲ್ಲಿನ ಸಕ್ರಿಯ ಪ್ರಕರಣಗಳು ಸ್ಥಿರವಾಗಿ ಕುಸಿಯುತ್ತಿದೆ. ಆದರೆ, ಕೆಲ ರಾಜ್ಯಗಳ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಕೋವಿಡ್ ಪ್ರಕಱಣಗಳು ಪತ್ತೆಯಾಗುತ್ತಿವೆ. ಸೋಂಕು ಹೆಚ್ಚುತ್ತಿರುವ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದು, ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆಂದು ಹೇಳಿದ್ದಾರೆ. 

ಕೇರಳ ಹಾಗೂ ತಮಿಳುನಾಡು ಗಡಿ ಪ್ರದೇಶಗಳಲ್ಲಿ ಬರುವ ಜಿಲ್ಲೆಗಳಲ್ಲಿಯೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಕೇರಳ ಹಾಗೂಮಹಾರಾಷ್ಟ್ರ ಗಡಿ ಪ್ರದೇಶಗಳಿಂದ ರಾಜ್ಯ ಪ್ರವೇಶಿಸುವವರಿಗೆ ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಿದೆ. ಅಲ್ಲದೆ, ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನೂ ಜಾರಿ ಮಾಡಿದೆ. 

ಈ ನಡುವೆ, ಚಾಮರಾಜನಗರ ಜಿಲ್ಲಾ ಆಡಳಿತ ಮಂಡಳಿ ಕೂಡ ತಮಿಳುನಾಡಿನ ಪ್ರವಾಸಿಗರಿಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ. ಜಿಲ್ಲೆಯ ಹಲವಾರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಪುಣಜನೂರು, ಆರಾಧನಿಪುರ ಬಳಿಯ ನಾಲ್ ರಸ್ತೆ ಮತ್ತು ಹನೂರು ತಾಲೂಕಿನ ಪಾಲಾರ್ ನಲ್ಲಿ ತಪಾಸಣೆಗಳನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಹೆಚ್ಚು ಸೋಂಕಿರುವ ಜಿಲ್ಲೆಗಳ ಪ್ರವಾಸಿ ಸ್ಥಳಗಳ ಮೇಲೂ ತೀವ್ರ ನಿಗಾ ಇರಿಸಲಾಗಿದೆ. ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ಹೆಚ್ಚಿಸಲಾಗಿದೆ ಮತ್ತು ಇತರೆ ಜಿಲ್ಲೆಗಳಲ್ಲೂ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಆದೇಶಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತೀ ರಾಜ್ಯದಲ್ಲೂ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (ಆರ್‌ಆರ್‌ಟಿ) ತಂಡ ರಚಿಸಲು ಆದೇಶ ಹೊರಡಿಸಲಾಗಿದೆ ಕರ್ನಾಟಕದಲ್ಲೂ ಕೂಡ ಈ ತಂಡವನ್ನು ರಚಿಸಲಾಗುತ್ತಿದೆ. ಈ ತಂಡದಲ್ಲಿ ಕ್ಲಿನೀಶಿಯನ್, ಮೈಕ್ರೋಬಯಾಲಜಿಸ್ಟ್ ಮತ್ತು ಮೆಡಿಕಲ್ ಕಾಲೇಜಿನ ಸದಸ್ಯರೊಬ್ಬರು ಇರಲಿದ್ದಾರೆ. ಈ ತಂಡವು ಜಿಲ್ಲೆಗಳಾದ್ಯಂತ ಜೀನೋಮ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಹೊಸ ರೂಪಾಂತರ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಈ ತಂಡ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವುದು ಸೇರಿದಂತೆ ಇತರೆ ಕಾರ್ಯಗಳನ್ನು ಮಾಡುತ್ತದೆ 

ರೂಪಾಂತರಿ ವೈರಸ್ ಪತ್ತೆಯಾದ ಬಳಿಕ ಸೋಂಕಿತ ವ್ಯಕ್ತಿ ಅವರ ಕುಟುಂಬ ಸದಸ್ಯರು ಮತ್ತು ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರ ಮಾದರಿಗಳನ್ನು ಈ ತಂಡ ಸಂಗ್ರಹಿಸುತ್ತದೆ ಮತ್ತು ಸೋಂಕು ಹರಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರತೀನಿತ್ಯ ವರದಿಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಒದಗಿಸುವ ಕೆಲಸವನ್ನು ಈ ತಂಡ ಮಾಡುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com