ನಾಯಕರ ವಿರುದ್ಧದ ಕೈಬಿಡಲಾದ ಪ್ರಕರಣಗಳ ಪಟ್ಟಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ರಾಜ್ಯದ ಸಂಸದರು ಮತ್ತು ಶಾಸಕರ ಮೇಲೆ ದಾಖಲಾಗಿದ್ದ ಪ್ರಕರಣಗಳಲ್ಲಿ ಸೆಪ್ಟೆಂಬರ್ 16, 2020ರ ಅವಧಿಗೂ ಮುನ್ನ ಹಿಂಪಡೆಯಲಾದ ಪ್ರಕರಣಗಳ ಪಟ್ಟಿಯನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Published: 12th August 2021 02:34 PM | Last Updated: 12th August 2021 03:31 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ರಾಜ್ಯದ ಸಂಸದರು ಮತ್ತು ಶಾಸಕರ ಮೇಲೆ ದಾಖಲಾಗಿದ್ದ ಪ್ರಕರಣಗಳಲ್ಲಿ ಸೆಪ್ಟೆಂಬರ್ 16, 2020ರ ಅವಧಿಗೂ ಮುನ್ನ ಹಿಂಪಡೆಯಲಾದ ಪ್ರಕರಣಗಳ ಪಟ್ಟಿಯನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾದ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಪ್ರಕ್ರಿಯೆಯ ಮೇಲೆ ನಿಗಾ ಇರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಅದರ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಮತ್ತು ಜಸ್ಟೀಸ್ ಎನ್ ಎಸ್ ಸಂಜಯ್ ಗೌಡ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಕ್ರಮಕ್ಕೆ ಮುಂದಾಗಿದೆ.
ಶಾಸಕರು ಮತ್ತು ಸಂಸದರ ಮೇಲೆ ದಾಖಲಾಗಿರುವ ಯಾವುದೇ ಪ್ರಕರಣವನ್ನು ಹೈಕೋರ್ಟ್ ಗಮನಕ್ಕೆ ತಾರದೆ ಹಿಂಪಡೆಯಬಾರದು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು ಈ ಸಂದರ್ಭದಲ್ಲಿ ಉಲ್ಲೇಖಾರ್ಹ.
ಅಗಸ್ಟ್ 2020ರಲ್ಲಿ ಕರ್ನಾಟಕ ಶಾಸಕರ ಮೇಲಿನ ೬೧ ಪ್ರಕರಣಗಳನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗಿತ್ತು.