ಕ್ಷೇತ್ರ ನಿರ್ಲಕ್ಷ್ಯ ಆರೋಪ: ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಮೂಡಿಗೆರೆ ಬಿಜೆಪಿ ಶಾಸಕ ಪ್ರತಿಭಟನೆ!
ನಮ್ಮದೇ ಸರ್ಕಾರವಿದ್ದರೂ ಕೂಡ ನನ್ನ ಕ್ಷೇತ್ರದಲ್ಲಿನ ಕೆಲಸಗಳನ್ನು, ಸಮಸ್ಯೆಗಳನ್ನು, ಆದ್ಯತೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಎದುರು ಏಕಾಂಗಿಯಾಗಿ ಧರಣಿ ಕುಳಿತುಕೊಂಡ ಪ್ರಸಂಗ ನಡೆಯಿತು.
Published: 12th August 2021 01:18 PM | Last Updated: 12th August 2021 03:27 PM | A+A A-

ವಿಧಾನಸೌಧ ಮುಂದೆ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ
ಬೆಂಗಳೂರು: ನಮ್ಮದೇ ಸರ್ಕಾರವಿದ್ದರೂ ಕೂಡ ನನ್ನ ಕ್ಷೇತ್ರದಲ್ಲಿನ ಕೆಲಸಗಳನ್ನು, ಸಮಸ್ಯೆಗಳನ್ನು, ಆದ್ಯತೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ, ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಎದುರು ಏಕಾಂಗಿಯಾಗಿ ಧರಣಿ ಕುಳಿತುಕೊಂಡ ಪ್ರಸಂಗ ನಡೆಯಿತು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಏಕೋ ಗಮನವೇ ಹರಿಸುತ್ತಿಲ್ಲ, ಅದು ಮೀಸಲು(ರಿಸರ್ವೇಶನ್) ಕ್ಷೇತ್ರವೆಂಬ ಕಾರಣಕ್ಕೋ ಏನೋ ಕಡೆಗಣಿಸ್ತಿದ್ದಾರೆ ಎಂದು ಕುಮಾರಸ್ವಾಮಿ ನೊಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
2019ರಲ್ಲಿ ನಮ್ಮ ನಮ್ಮ ತಾಲ್ಲೂಕು ಸೇರಿದಂತೆ ಚಿಕ್ಕಮಗಳೂರಿನಲ್ಲಿ ಅತಿವೃಷ್ಟಿಯಾಯಿತು, 6 ಮಂದಿ ಮನೆ ಸಮೇತ ಕೊಚ್ಚಿಕೊಂಡು ಹೋಗಿ ಶವ ಹುಡುಕಲು ಹತ್ತಾರು ದಿನವಾಯಿತು. ಪರಿಹಾರ ಕೊಡಿ ಎಂದು ಸರ್ಕಾರಕ್ಕ ಕೇಳಿಕೊಂಡರೂ ಅತ್ಯಂತ ನಿರ್ಲಕ್ಷ್ಯ ಮಾಡಿದರು. ಕಳೆದ ವರ್ಷ ಕೂಡ ನಮ್ಮ ತಾಲ್ಲೂಕಿನ ಜನರಿಗೆ ಮಳೆಹಾನಿಯಿಂದ ಹಲವು ಸಂಕಷ್ಟ ಎದುರಾಯಿತು, ಬೇರೆ ಕ್ಷೇತ್ರಗಳಿಗೆ ಸರ್ಕಾರ ಪರಿಹಾರ ನೀಡಿದ್ದರೂ ನಮ್ಮ ತಾಲ್ಲೂಕನ್ನು ಕಡೆಗಣಿಸಲಾಗಿದೆ ಎಂದರು.
ನಮ್ಮದೇ ಸರ್ಕಾರ ಈ ರೀತಿ ತಾರತಮ್ಯ ಮಾಡಬಾರದು. ನಮ್ಮದು ಆದಷ್ಟು ಬೇಗ ಸಾಮಾನ್ಯ ಕ್ಷೇತ್ರ ಆಗಲಿ ಅನಿಸುತ್ತಿದೆ. ಸಚಿವ ಆರ್.ಅಶೋಕ್ ಈ ರೀತಿ ಮಾಡಿದ್ದಾರೆ ಅನಿಸುತ್ತಿಲ್ಲ. ಎಲ್ಲ ಉಸ್ತುವಾರಿ ಸಚಿವರು ಭೇಟಿ ನೀಡ್ತಾರೆ, ಏನೂ ಮಾಡಲ್ಲ. ಇವರಿಗೆ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ, ಹೀಗಾಗಿ ಧರಣಿ ಕುಳಿತಿರುವೆ ಎಂದರು.
ಸ್ಥಳಕ್ಕೆ ಸಚಿವ ಆರ್ ಅಶೋಕ್ ಭೇಟಿ: ತಮ್ಮದೇ ಪಕ್ಷದ ಶಾಸಕರು ವಿಧಾನಸೌಧ ಮುಂದೆ ಧರಣಿ ನಡೆಸುತ್ತಿರುವುದರಿಂದ ಮುಜುಗರ ಉಂಟಾಗಬಾರದೆಂದು ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕನ ಮೂಲಕ ಫೋನ್ ನಲ್ಲಿ ಪ್ರತಿಕ್ರಿಯಿಸಿದರು. ಆಗ ಶಾಸಕ ಕುಮಾರಸ್ವಾಮಿ ಸಚಿವರನ್ನೇ ಇಲ್ಲಿಗೆ ಬರಲು ಹೇಳಿ, ನಾವೇನು ಲೂಟಿ ಮಾಡಲು ಬಂದಿಲ್ಲ ಎಂದರು.
ಕಣ್ಣೀರು ಹಾಕಿದ ಶಾಸಕ ಎಂಪಿ ಕುಮಾರಸ್ವಾಮಿ: ಆಪ್ತ ಕಾರ್ಯದರ್ಶಿ ಮೂಲಕ ಸಂಧಾನ ಯತ್ನ ವಿಫಲವಾದ ಬಳಿಕ ಖುದ್ದು ಸಚಿವ ಆರ್ ಅಶೋಕ್ ಅವರೇ ಶಾಸಕ ಕುಮಾರಸ್ವಾಮಿ ಧರಣಿ ಕುಳಿತಿದ್ದ ಸ್ಥಳಕ್ಕೆ ದೌಡಾಯಿಸಿದರು. ಸಚಿವರ ಮುಂದೆ ಎಂಪಿ ಕುಮಾರಸ್ವಾಮಿ ಕಣ್ಣೀರು ಹಾಕಿದರು. ಮನವೊಲಿಕೆಗೆ ಗಾಂಧಿ ಪ್ರತಿಮೆ ಬಳಿಯೇ ಬಂದ ಆರ್ ಅಶೋಕ್ ಅವರನ್ನು ಕಾಣುತ್ತಿದ್ದಂತೆ ಎಂಪಿ ಕುಮಾರಸ್ವಾಮಿ ಕಣ್ಣೀರುಗೆರೆದರು.
ಆಗ ಅವರನ್ನು ಸಮಾಧಾನಪಡಿಸಲು ಸಚಿವ ಆರ್ ಅಶೋಕ್ ತಕ್ಷಣ ಅವರನ್ನು ತಮ್ಮ ಕಚೇರಿಗೆ ಕರೆದೊಯ್ದ ಪ್ರಸಂಗ ನಡೆಯಿತು.