ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ 3ನೇ ಅಲೆ ನಿಯಂತ್ರಣ ಸಂಬಂಧ ಇಂದು ಸಿಎಂ ನೇತೃತ್ವದಲ್ಲಿ ಸಭೆ: ಬೆಂಗಳೂರಲ್ಲಿ ಜಾರಿಯಾಗುತ್ತಾ ವೀಕೆಂಡ್ ಲಾಕ್?

ಕೊರೋನಾ ಮೂರನೇ ಅಲೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಳೆ ಸ್ವಾತಂತ್ರ್ಯ ದಿನಾಚರಣೆ ಬಳಿಕ ಕಠಿಣ ನಿಯಮ ಜಾರಿಗೆ ತರುವ ಸಾಧ್ಯತೆ ಬಹುತೇಕ ನಿಚ್ಚಳ ಎಂದು ಹೇಳಲಾಗುತ್ತಿದೆ.

ಬೆಂಗಳೂರು:ಕೋವಿಡ್ 3ನೇ ಅಲೆ ನಿರ್ವಹಣೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಜ್ಞರು, ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಮುಖ ನಿರ್ಧಾರಗಳನ್ನು  ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.

ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಬೊಮ್ಮಾಯಿಯವರು ಬೆಂಗಳೂರು ಸೇರಿದಂತೆ ಜಿಲ್ಲೆಗಳಿಗೆ  ಕೊರೋನಾ ಮೂರನೇ ಅಲೆಯನ್ನು ಆರಂಭದಲ್ಲಿಯೇ ನಿಯಂತ್ರಿಸಲು ಹೊಸ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ವಾರಾಂತ್ಯ ಕರ್ಫ್ಯೂ, ಕಟ್ಟುನಿಟ್ಟಿನ ನಿರ್ಬಂಧ: ಮೊದಲಿಗೆ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ಸೇರಿದಂತೆ ಹಂತಹಂತವಾಗಿ  ನಿರ್ಬಂಧಗಳನ್ನು ಬೆಂಗಳೂರಿನಲ್ಲಿ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇನ್ನು ಕೆಲದಿನಗಳವರೆಗೆ ಬೆಂಗಳೂರು ವಾರಾಂತ್ಯಗಳಲ್ಲಿ ಲಾಕ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

ನಿನ್ನೆ ಉಡುಪಿಯಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಸ್ವಾತಂತ್ರ್ಯ ದಿನಾಚರಣೆ ನಂತರ ಬೆಂಗಳೂರಿನಲ್ಲಿ ಹೆಚ್ಚಿನ ಕಠಿಣ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದು ಲಾಕ್ ಡೌನ್ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 
ನಾವು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ವಿವರವಾಗಿ ಚರ್ಚೆಯನ್ನು ನಡೆಸಿ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ.

ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮೂರನೇ ಅಲೆಯನ್ನು ತಡೆಗಟ್ಟಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಬೆಂಗಳೂರಿನಲ್ಲಿ ನಿನ್ನೆ ಹೇಳಿದ್ದಾರೆ. ಈಗ ಶ್ರಾವಣ ಮಾಸವಾಗಿರುವುದರಿಂದ ಸಾಲು ಸಾಲು ಹಬ್ಬಗಳು ಬರುವುದರಿಂದ ಜನಸಂದಣಿಯನ್ನು ನಿರ್ಬಂಧಿಸುವಂತಹ ಮಾರ್ಗಸೂಚಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ. ಹಾಗೆಂದು ಲಾಕ್ ಡೌನ್ ಕೊರೋನಾ ನಿಯಂತ್ರಣಕ್ಕೆ ಪರಿಹಾರವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾರೆ.

ಲಾಕ್ ಡೌನ್ ಹೇರಿದರೆ ಜನರಿಗೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಇತರ ಸಂಭವನೀಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯದ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಯಾವುದೇ ತೀವ್ರ ಏರಿಕೆಯಾಗಿಲ್ಲ ಎಂದು ಕೂಡ ಸಿಎಂ ಹೇಳಿದ್ದಾರೆ."ಆದಾಗ್ಯೂ, ಸರ್ಕಾರವು ಹೊಸ ಮಕ್ಕಳ ಆಸ್ಪತ್ರೆಗಳ ಸ್ಥಾಪನೆ ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ ನೀಡುವುದು ಸೇರಿದಂತೆ ಮೂಲಸೌಕರ್ಯವನ್ನು ಹೆಚ್ಚಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ಕಂದಾಯ ಸಚಿವ ಅಶೋಕ ಹೇಳಿದ್ದಾರೆ. ಆದರೆ ಎಲ್ಲಾ ಜಿಲ್ಲೆಗಳ ಉಪ ಆಯುಕ್ತರಿಗೆ ಕೊರೋನಾ ಹೆಚ್ಚಳ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಕೇವಲ ಗಡಿ ಜಿಲ್ಲೆಗಳ ಪರಿಸ್ಥಿತಿಯತ್ತ ಗಮನ ಹರಿಸುವುದರ ಜೊತೆಗೆ ಬೆಂಗಳೂರಿನಲ್ಲಿ ಕೋವಿಡ್ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಿಲ್ಲೆಗಳಿಂದ ಬೆಂಗಳೂರಿಗೆ ಬರುವಾಗ ನಗರದಲ್ಲಿ ಉಲ್ಬಣಗೊಳ್ಳುವ ಹೆಚ್ಚಿನ ಅವಕಾಶವಿದೆ ಎಂದು ಅವರು ಎಚ್ಚರಿಸಿದ್ದಾರೆ.

9ರಿಂದ 12ನೇ ತರಗತಿಗೆ ಶಾಲೆ, ಕಾಲೇಜು ಆರಂಭ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸ್ಥಿರವಾಗಿ ಏರಿಕೆಯಾಗುತ್ತಿದ್ದರೂ, ಶಿಕ್ಷಣ ಇಲಾಖೆ ಆಗಸ್ಟ್ 23 ರಿಂದ 9-12ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ. ಇದು ಸಾಕಾರಗೊಂಡರೆ, ಸರ್ಕಾರವು ಕೆಳಗಿನ ಹಂತದ ತರಗತಿಗಳಿಗೆ ಸೆಪ್ಟೆಂಬರ್ ನಲ್ಲಿ ಶಾಲೆ ಆರಂಭಿಸುವತ್ತ ಗಮನ ಹರಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ,  ಹಿರಿಯ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾದ ನಂತರ, ಇಲಾಖೆ ಪರಿಸ್ಥಿತಿಯನ್ನು ಪರಿಶೀಲಿಸಿ ನಂತರ ಕೆಳ ಹಂತದ ತರಗತಿಗಳಿಗೆ ಆರಂಭಿಸಲಿದೆ, ಪ್ರಾಥಮಿಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸುವ ಬಗ್ಗೆ ತಜ್ಞರ ಸಮಿತಿಯು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. 

ಅಪಾರ್ಟ್ ಮೆಂಟ್ ಗಳಿಗೆ ಹೊಸ ಮಾರ್ಗಸೂಚಿ: ಕೊರೋನಾ ಮೂರನೇ ಅಲೆ ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಹೆಚ್ಚು ಕಾಡುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಪಾರ್ಟ್ ಮೆಂಟ್ ಗಳಿಗೆ ಹೊಸ ನಿಯಮ ಜಾರಿಗೆ ತಂದಿದ್ದು ನಿಯಮ ಉಲ್ಲಂಘಿಸಿದರೆ ಕಂಟಕ ಕಾದಿದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಅಪಾರ್ಟ್ ಮೆಂಟ್ ನ ಜಿಮ್ ಗಳಿಗೆ 50-50 ನಿಯಮ ಜಾರಿಗೆ, 3 ವರ್ಷದ ಮೇಲ್ಪಟ್ಟ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯ, ಕೊರಿಯರ್ ಸೇರಿದಂತೆ ಡೆಲಿವರಿ ಸೇವೆಗಳನ್ನು ಅಪಾರ್ಟ್ ಮೆಂಟ್ ಗಳಲ್ಲಿ ಕಡಿಮೆ ಮಾಡಬೇಕು. ಆರೋಗ್ಯ ಸಿಬ್ಬಂದಿ ತಪಾಸಣೆಗೆ ಬಂದರೆ ನಿವಾಸಿಗಳು ಸಹಕರಿಸಬೇಕು ಎಂದು ಬಿಬಿಎಂಪಿ ನಿಯಮ ಪ್ರಕಟಿಸಿದೆ.

ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕೊರೋನಾ ನೆಗೆಟಿವ್ ವರದಿ ಮತ್ತು ಲಸಿಕೆ ಪಡೆದ ಸರ್ಟಿಫಿಕೇಟ್ ಕಡ್ಡಾಯ ಎಂದು ಹೇಳಲಾಗುತ್ತಿದೆ. 

ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ: ಸಾಂಸ್ಕೃತಿಕ ನಗರಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೋನಾ ಹೆಚ್ಚುತ್ತಿರುವುದರಿಂದ ವೀಕೆಂಡ್ ಕರ್ಫ್ಯೂ ಮಾಡಿ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com