ಭಾರತೀಯರಿಗೆ ಆಂತರಿಕವಾಗಿಯೂ ಭಯೋತ್ಪಾದನೆಯ ಅಪಾಯವಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಭಾರತೀಯರಾದ ನಾವು ಕೇವಲ ನೆರೆಯ ರಾಷ್ಟ್ರಗಳಿಂದ ಮಾತ್ರ ಭಯೋತ್ಪಾದಕತೆ ಅಪಾಯವನ್ನು ಎದುರಿಸುತ್ತಿಲ್ಲ. ಆಂತರಿಕವಾಗಿಯೂ ಭಯೋತ್ಪಾದನೆಯ ಅಪಾಯವಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಭಾರತೀಯರಾದ ನಾವು ಕೇವಲ ನೆರೆಯ ರಾಷ್ಟ್ರಗಳಿಂದ ಮಾತ್ರ ಭಯೋತ್ಪಾದಕತೆ ಅಪಾಯವನ್ನು ಎದುರಿಸುತ್ತಿಲ್ಲ. ಆಂತರಿಕವಾಗಿಯೂ ಭಯೋತ್ಪಾದನೆಯ ಅಪಾಯವಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಪೂರ್ವಭಾಗದ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ ವಿಧಾನಮಂಡಲ ವತಿಯಿಂದ 75ನೇ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವ ಆಚರಿಸಲಾಯಿತು. ಇದೇ ಮೊದಲ ಬಾರಿಗೆ ವಿಧಾನಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಪತಿಗಳು ಒಟ್ಟಿಗೆ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಆಚರಣಾ ಕಾರ್ಯಕ್ರವನ್ನುದ್ದೇಶಿಸಿ ಸ್ಪೀಕರ್ ಮಾತನಾಡಿದರು. ಮಾವೋವಾದಿಗಳ ರೂಪದಲ್ಲಿ, ನಕ್ಸಲರ ರೂಪದಲ್ಲಿ ಸಮಾಜ ಒಡೆಯುವ ಪ್ರಯತ್ನ ನಡೆದಿದೆ. ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ. ನಮ್ಮ ಹಿಂದಿನ ಸರ್ಕಾರಗಳ ತಪ್ಪಿನಿಂದಾಗಿ ನಾವು ಇನ್ನು ಬ್ರಿಟೀಷ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದೇವೆ.ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು ಎಂದರು.

ವಿಧಾನಮಂಡಲದ ವತಿಯಿಂದ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವವನ್ನು ಅಯೋಜಿಸಿದ್ದಿಂದ  ಇದು ಇತಿಹಾಸದ ಪುಟಗಳಲ್ಲಿ ಸೇರುತ್ತದೆ. 75ನೇ ಸ್ವಾತಂತ್ರ್ಯೋತ್ಸವ ಹಾಗಾಗಿ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ನಿರ್ಧರಿಸಿದ್ದೇವೆ ಎಂದರು.

ಸ್ವಾತಂತ್ರ್ಯ ಹೋರಾಟವೆಂದರೆ ಕೇವಲ ಬ್ರಿಟೀಷರ ವಿರುದ್ದದ ಹೋರಾಟವಲ್ಲ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಡಚ್ಚರು, ಪ್ರಂಚರು, ಹೂಣರು, ಗ್ರೀಕರು, ಮೊಘಲರು ಸೇರಿ ಎಲ್ಲ ಪರಕೀಯರ ದಾಳಿಯ ಸಂದರ್ಭದಲ್ಲೂ ನಡೆದ ಹೋರಾಟವನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಕಾಗೇರಿ ಕರೆ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಸಭಾಪತಿ ಮತ್ತು ವಿಧಾನಸಭಾಧ್ಯಕ್ಷರು ಒಟ್ಟಿಗೆ ಸೇರಿ ವಿಧಾನಸೌಧದಲ್ಲಿ ಧ್ವಜಾರೋಹಣ ನೆರವೇರಿಸಿದ್ದು.ಇದರಿಂದಾಗಿ ಕರ್ನಾಟಕ ವಿಧಾನಸಭೆ ಇಂದು ದೇಶಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಯಿಂದ ಗರ್ವದಿಂದ ಹಾಗೂ ಸ್ವಾಭಿಮಾನಪೂರ್ಣ ಧ್ವನಿಯಿಂದ 'ಭಾರತ್ ಮಾತಾಕಿ ಜೈ' ಎನ್ನುವ ಘೋಷಣೆ ಮೊಳಗಿಸುವ ಪರ್ವಕಾಲ ಇದಾಗಿದೆ. ಸ್ವಂತಕ್ಕೆ ಸ್ವಲ್ಪ,ದೇಶಕ್ಕೆ ಸರ್ವಸ್ವ ಎಂಬ ಧ್ಯೇಯವಾಕ್ಯದೊಂದಿಗೆ ತಮ್ಮ ಇಡೀ ಬದುಕನ್ನು ದೇಶಕ್ಕಾಗಿ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆಯನ್ನು ಇಂದಿನ ಪೀಳಿಗೆಗೆ ಅರಿವು ಮೂಡಿಸಿ, ಪುನರ್ ಮನನ ಮಾಡುವಂತೆ ಪ್ರೇರೇಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಂಸದೀಯ ವ್ಯವಸ್ಥೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವ ಅಪಸ್ವರಗಳು ಕೇಳಿ ಬರುತ್ತಿರುವುದು ವಿಷಾದನೀಯ.ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು,ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.ನಮ್ಮ ಸದನಗಳು ಮಾತಿನ ಮನೆಗಿಂತ ಗರಡಿ ಮನೆಗಳಾಗಿ ಪರಿವರ್ತನೆಯಾಗುತ್ತಿವೆ ಎನ್ನುವ ಸಾರ್ವಜನಿಕರ ಅಭಿಪ್ರಾಯ ಕುರಿತು ಬಹಳ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ. ನೈತಿಕತೆ,ತತ್ವ ಸಿದ್ದಾಂತಗಳು, ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ ಎನ್ನುವ ಕಳವಳದ ಕುರಿತು ಚಿಂತನೆ ಮಾಡಿ ಮೌಲ್ಯಗಳ ಮರುಸ್ಥಾಪನೆ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ ಎಂದರು.

ರಾಜಕಾರಣದಲ್ಲಿ ಹೆಚ್ಚಾಗುತ್ತಿರುವ ಅಪರಾಧೀಕರಣಕ್ಕೆ ಇತಿಶ್ರೀ ಹಾಡುವ ಮೂಲಕ ಮುಂದಿನ ಪೀಳಿಗೆಯಲ್ಲಿ ರಾಜಕೀಯ ನೈತಿಕತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಮೂಲಕ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಷ್ಟೆಯನ್ನು ಎತ್ತಿಹಿಡಿಯುವ ಸಂಕಲ್ಪವನ್ನು ಮಾಡಬೇಕಾಗಿದೆ ಎಂದು ಹೊರಟ್ಟಿ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com