ಮೂಡಿಗೆರೆ ಸೇರಿದಂತೆ 83 ತಾಲ್ಲೂಕು ಪ್ರವಾಹ ಪೀಡಿತ; ಸರ್ಕಾರ ಘೋಷಣೆ: ಶಾಸಕ ಎಂಪಿ ಕುಮಾರಸ್ವಾಮಿ ಹೋರಾಟಕ್ಕೆ ಸಿಕ್ಕ ಫಲ!

ರಾಜ್ಯದ 13 ಜಿಲ್ಲೆಗಳಲ್ಲಿ 61 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಕಂದಾಯ ಸಚಿವ ಆರ್ ಅಶೋಕ್ ಮತ್ತು ಕಳೆದ ವಾರ ವಿಧಾನ ಸೌಧ ಮುಂದೆ ಧರಣಿ ಕುಳಿತಿದ್ದ ಶಾಸಕ ಎಂ ಪಿ ಕುಮಾರಸ್ವಾಮಿ
ಕಂದಾಯ ಸಚಿವ ಆರ್ ಅಶೋಕ್ ಮತ್ತು ಕಳೆದ ವಾರ ವಿಧಾನ ಸೌಧ ಮುಂದೆ ಧರಣಿ ಕುಳಿತಿದ್ದ ಶಾಸಕ ಎಂ ಪಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ 61 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಕೆಲವು ಕಡೆ ಏಕಾಏಕಿ ಮಳೆ ಬಂದು ಹೆಚ್ಚು ಹಾನಿಯುಂಟಾಗಿದೆ. ಮತ್ತೊಂದು ಬಾರಿ ಜಿಲ್ಲಾಧಿಕಾರಿಗಳ ವರದಿ ಮತ್ತು ಅಧಿಕಾರಿಗಳ ಸಭೆ ನಡೆಸಿದ ಮೇಲೆ ಹೆಚ್ಚುವರಿಯಾಗಿ 22 ತಾಲ್ಲೂಕುಗಳು ಒಟ್ಟು ಸೇರಿ 83 ತಾಲ್ಲೂಕಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ನಗರದಲ್ಲಿಂದು ತಿಳಿಸಿದ್ದಾರೆ.

ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರಿಕೆರೆ, ಸೂಪ ಬಬಲೇಶ್ವರ, ಕೋಲಾರ, ಮುದ್ದೆಬಿಹಾಳ, ಮೂಡಿಗೆರೆ, ಹೊಸನಗರ ಮೊದಲಾದ ತಾಲ್ಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ. ಹಾನಿಗೀಡಾದ ಪ್ರದೇಶಗಳನ್ನು ಗುರುತಿಸಿದ್ದೇವೆ. ಇಲ್ಲಿ ಸರ್ಕಾರದಿಂದ ನೀಡಬೇಕಾದ ಅನುದಾನ ಪರಿಹಾರಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಮಳೆ ಬಂದಾಗ ಉಂಟಾಗುವ ಹಾನಿಗೆ ಶಾಶ್ವತ ಪರಿಹಾರ ಯೋಜನೆಯನ್ನು ರೂಪಿಸಲು ಮುಂದಾಗಿರುವ ಸರ್ಕಾರ ಶಾಶ್ವತ ರೆಡಿಮೇಡ್ ಸ್ಲ್ಯಾಬ್ ಗಳನ್ನು ಸಿದ್ದಪಡಿಸಲು ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ. 

ತೀವ್ರ ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಆಗುತ್ತದೆ. ಅದಕ್ಕೆ ಈ ಶಾಶ್ವತ ಸ್ಲ್ಯಾಬ್ ಉಪಯೋಗವಾಗಲಿದೆ. ಅದಕ್ಕೆ ಸಮೀಕ್ಷೆ ಮಾಡಲು ನೀಡಿದ್ದೇನೆ. ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಆಗಿರುವ ಕಳಪೆ ಕಾಮಗಾರಿಯನ್ನು ತೆಗೆದು ಹೊಸ ಕಾಮಗಾರಿ ಮಾಡುವಂತೆ ಸೂಚನೆ ನೀಡಿದ್ದೇನೆ, ಕಳಪೆ ಕಾಮಗಾರಿಯನ್ನು ಸರ್ಕಾರ ಸಹಿಸುವುದಿಲ್ಲ, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಹೇಳಿದರು.

ರಾಜ್ಯದ 31 ಜಿಲ್ಲೆಗಳಿಗೂ ನಾನು ಪ್ರವಾಸ ಮಾಡಿ ಬಂದಿದ್ದು, ಕೇಂದ್ರ ಸರ್ಕಾರದ ಧನಸಹಾಯದಡಿ ಸಿಡಿಲು, ಮಿಂಚು ಬರುವ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ಬರದಂತೆ ಸೂಚನೆ ನೀಡುವ ಸೌಂಡ್ ಸಿಸ್ಟಮ್ ನ್ನು ಗ್ರಾಮ ಪಂಚಾಯತ್ ನಲ್ಲಿ ಜಾರಿಗೆ ತರುತ್ತಿದ್ದು ಇನ್ನು ಒಂದೂವರೆ ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.

ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದಿಂದ ಹಾವಳಿಯನ್ನು ತಪ್ಪಿಸಲು 6 ಕಿಲೋ ಮೀಟರ್ ದೂರಕ್ಕೆ ಸೈರನ್ ಅಲರಾಂ ಕೊಡುವಂತಹ ವ್ಯವಸ್ಥೆಯನ್ನು 60 ಕಡೆ ಅಳವಡಿಸಲಾಗುವುದು. ಬೆಂಗಳೂರಿನ ಹವಾಮಾನ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ, ಅದಕ್ಕೆ ಕೂಡ ಕೇಂದ್ರ ಸರ್ಕಾರ ಹಣ ನೀಡುತ್ತಿದೆ ಎಂದರು.

ನೆರೆಪೀಡಿತ ಪ್ರದೇಶದ ಪಟ್ಟಿಗೆ ಮೂಡಿಗೆರೆ ಸೇರಿಸಬೇಕು, ನಮ್ಮದೇ ಸರ್ಕಾರವಿದ್ದರೂ ಯಾಕೋ ನಮ್ಮ ಮಾತಿಗೆ ಕಿಮ್ಮತ್ತೇ ನೀಡುತ್ತಿಲ್ಲ, ಮೀಸಲು ಕ್ಷೇತ್ರವೆಂಬ ಕಾರಣಕ್ಕೆ ನಮ್ಮ ಮೂಡಿಗೆರೆ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಆರೋಪಿಸಿ ವಿಧಾನ ಸೌಧ ಮುಂದೆ ಧರಣಿ ಕುಳಿತಿದ್ದರು. ಇದೀಗ ಅವರ ಪ್ರತಿಭಟನೆಗೆ ಫಲ ಸಿಕ್ಕಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com