ಶ್ರೀಗಂಧ ಕಳ್ಳರಿಗೆ ಅರಣ್ಯಾಧಿಕಾರಿಗಳ ಗುಂಡೇಟು: ಓರ್ವ ಖದೀಮ ಸಾವು, ಮೂವರು ನಾಪತ್ತೆ

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡಿಗೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯದಲ್ಲಿ ನಡೆದಿದೆ. 
ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು

ತುಮಕೂರು: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡಿಗೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯದಲ್ಲಿ ನಡೆದಿದೆ. 

ಗುಂಡೇಟಿಗೆ ಬಲಿಯಾದವನ ಗುರುತು ಇನ್ನೂ ಪತ್ತೆಯಾಗಿಲ್ಲ. ವ್ಯಕ್ತಿಯ ವಯಸ್ಸು 30-35 ಆಸುಪಾಸಿನದ್ದಾಗಿದ್ದು, ಕೈಮೇಲೆ ಕನ್ನಡದಲ್ಲಿ ಈಶ್ವರ ಎಂಬ ಅಚ್ಚೆ ಇರುವುದು ಕಂಡು ಬಂದಿದೆ. 

ಗುಂಡೇಟಿಗೆ ಬಲಿಯಾದವನು ಸೇರಿದಂತೆ ನಾಲ್ವರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದರು ಎನ್ನಲಾಗಿದೆ. ಇದೀಗ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. 

ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಕಂಪಾಲಾಪುರ ಮೀಸಲು ಆರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಶ್ರೀಗಂಧ ಪ್ಲಾಂಟ್ ಮಾಡಲಾಗಿದೆ. ಸುಮಾರು 1500ಕ್ಕೂ ಹೆಚ್ಚು ಶ್ರೀಗಂಧದ ಮರಗಳಿವೆ ಈ ಹಿಂದೆಯೂ ಇಲ್ಲಿ ಸಾಕಷ್ಟು ಭಾರಿ ಶ್ರೀಗಂಧ ಕಳವು ಪ್ರಕರಣಗಳು ನಡೆದಿವೆ.

ಶನಿವಾರ 4 ಜನ ಕಳ್ಳರು ಶ್ರೀಗಂಧ ಮರಗಳನ್ನು ಕತ್ತರಿಸುತ್ತಿದ್ದಾಗ ಗಸ್ತಿನಲ್ಲಿದ್ದ ಉಪ ಅರಣ್ಯಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ಶಿವನಂಜಪ್ಪ, ಶರಣಪ್ಪ, ಶಿವನಂಜಯ್ಯ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. 

ಈ ವೇಳೆ ಕಳ್ಳರು ಅರಣ್ಯ ಸಿಬ್ಬಂದಿಯ ಮೇಲೆ ಮಚ್ಚು ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಘಟನೆ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ವೇಳೆ ಅರಣ್ಯಾಧಿಕಾರಿಗಳು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕಳ್ಳರು ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದಾಗ ಅತ್ಮರಕ್ಷಣೆಗಾಗಿ ಉಪ ಅರಣ್ಯಾಧಿಕಾರಿ ಮಹೇಶ್ ನೇರವಾಗಿ ಕಳ್ಳರ ಮೇಲೆ ಗುಂಡು ಹಾರಿಸಿದಾಗ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಮೂವರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. 

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‌ಪಿ ರಾಹುಲ್ ಕುಮಾರ್, ಡಿಎಫ್‌ಓ ಡಾ.ರಮೇಶ್, ಎಸಿಎಫ್‌ಓ ಚಿಕ್ಕರಾಜು, ತಹಸೀಲ್ದಾರ್  ಮಹಾಬಲೇಶ್ವರ್, ಡಿವೈಎಸ್‌ಪಿ ರಮೇಶ್, ಸಿಪಿಐ ಗುರುಪ್ರಸಾದ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಗರಗಸ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಬೆಲೆಬಾಳುವ ಮರಗಳನ್ನು ಕಡಿಯಲು ಗ್ಯಾಂಗ್ ರಾತ್ರಿಯಿಡೀ ಕಾಡಿನಲ್ಲಿ ಬಿಡಾರ ಹೂಡಿದೆ ಎಂದು ತಿಳಿದುಬಂದಿದೆ. ಈ ಗ್ಯಾಂಗ್ ವೃತ್ತಿಪರ ಕಳ್ಳಸಾಗಾಣಿಕೆದಾರರಂತೆ ಕಾಣುತ್ತಿದೆಯ ಏಕೆಂದರೆ ತೈಲವನ್ನು ನೀಡುವ ಶ್ರೀಗಂಧದ ಮರಗಳ ಬೇರುಗಳನ್ನು ಕೂಡ ಅವರು ಅಗೆದಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಕ ಡಾ ಎಸ್ ರಮೇಶ್ ಅವರು ಹೇಳಿದ್ದಾರೆ. 

ಈ ನಡುವೆ ಘಟನಾ ಸ್ಥಳಕ್ಕೆ ಉಪ ಆಯುಕ್ತ ವೈ.ಎಸ್.ಪಾಟೀಲ್ ಹಾಗೂ ಎಸ್'ಪಿ ರಾಹುಲ್ ಕುಮಾರ್ ಶಹಪುರ್ವಾದ್ ಅವರು ಭೇಟಿ ನೀಡಿದ್ದು ಪರಿಶೀಲನೆ ನ ಡೆಸಿದ್ದಾರೆ. ಜಿಲ್ಲೆಯಲ್ಲಿ ಶ್ರೀಗಂಧ ಕಳ್ಳಸಾಗಾಣಿಕೆದಾರರ ಮೇಲೆ ಗುಂಡು ಹಾರಿಸಿರುವುದು ಇದೇ ಮೊದಲಾಗಿದೆ. ಇದೀಗ ಸಾವನ್ನಪ್ಪಿರುವ ಖದೀಮನ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಈ ವರೆಗೂ ಯಾರೊಬ್ಬರೂ ಶವ ಪಡೆದುಕೊಳ್ಳಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ. ಹುಲಿಯೂರು ದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com