ರಾಷ್ಟ್ರೀಯ ಶಿಕ್ಷಣ ನೀತಿ-2020 ಯಶಸ್ವಿಯಾದರೆ ಆಗಸ್ಟ್ 23 ಶಿಕ್ಷಣ ದಿನ ಎಂದು ಆಚರಿಸಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇವತ್ತು ನಾವೆಲ್ಲರೂ ಕ್ರಾಂತಿಕಾರಿ ಹೆಜ್ಜೆಯನ್ನಿಡುವ ದಿನ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ದೇಶದಲ್ಲಿ ಬದಲಾವಣೆಯನ್ನು ತರಬಹುದು ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ
ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ

ಬೆಂಗಳೂರು: ಇವತ್ತು ನಾವೆಲ್ಲರೂ ಕ್ರಾಂತಿಕಾರಿ ಹೆಜ್ಜೆಯನ್ನಿಡುವ ದಿನ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ದೇಶದಲ್ಲಿ ಬದಲಾವಣೆಯನ್ನು ತರಬಹುದು ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇವತ್ತು ಮಕ್ಕಳಿಗೆ ಸ್ವಾತಂತ್ರ್ಯ ದಿನದ ರೀತಿಯ ಭಾವನೆ ಬರುತ್ತಿದೆ, ಅದು ಕೋವಿಡ್ ನಿಂದ ಮುಕ್ತಿ ದಿನ. ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಮಾಡಿದರೂ ಇವತ್ತು ಮಕ್ಕಳಿಗೆ ನಿಜವಾದ ಸ್ವಾಂತಂತ್ರ್ಯ ಸಿಕ್ಕಿದೆ ಎಂಬ ಭಾವನೆ ನನ್ನದು. ಅದರ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ಬಂದಿದೆ. ಶಿಕ್ಷಣದಲ್ಲಿ ವಿಮುಕ್ತೀಕರಣ, ವಿಮೋಚನೆ ಸಿಕ್ಕಿದೆ ಎಂದು ನನ್ನ ಭಾವನೆ. ಇದು ಮುಂದಿನ ಜನಾಂಗಕ್ಕೆ ಶಿಕ್ಷಣದಲ್ಲಿ ವಿಮುಕ್ತಿ. ಇದು ಯಶಸ್ವಿಯಾದರೆ ಸೆಪ್ಟೆಂಬರ್ 5 ಶಿಕ್ಷಕರ ದಿನವಾಗಿ ಆಚರಿಸುವಂತೆ ಆಗಸ್ಟ್ 23ನ್ನು ಶಿಕ್ಷಣ ದಿನ ಎಂದು ಆಚರಿಸಬೇಕು ಎಂದು ಹೇಳಲು ನಾನು ಇಚ್ಛಿಸುತ್ತೇನೆ ಎಂದರು. 

ಈ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಗುವುದು ಎಂದು ಸಹ ಪ್ರಕಟಿಸಿದರು. 

ಇದಕ್ಕೂ ಮುನ್ನ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ವರ್ಚುವಲ್ ಕಾರ್ಯಕ್ರಮ ಮೂಲಕ ದೆಹಲಿಯಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಚಾಲನೆ ನೀಡಿದರು. 

ಎನ್ ಇಪಿ 2020: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾರಂಭಿಸುವುದರ ಜೊತೆಗೆ ಕರ್ನಾಟಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿ ಸಮುದಾಯದಲ್ಲಿ ನೀತಿಯ ಬಗ್ಗೆ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಮತ್ತು ನಿರ್ವಹಣಾ ಸಿಬ್ಬಂದಿಗೆ ಸಂವಹನ, ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳನ್ನು ನಡೆಸುವ ಮೂಲಕ ನೀತಿಯ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ.

ಕರ್ನಾಟಕದ ವಿಶ್ವವಿದ್ಯಾನಿಲಯಗಳಿಗೆ ಪ್ರತ್ಯೇಕ ಸಹಾಯವಾಣಿಯನ್ನು ಸ್ಥಾಪಿಸಲಾಗುತ್ತಿದೆ. ಮಾಧ್ಯಮದ ಮೂಲಕ ಲಭ್ಯವಾಗುವಂತೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುವ ನೀತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಹಾಯವಾಣಿ ಸಿಬ್ಬಂದಿ ಉತ್ತರಿಸಲಿದ್ದಾರೆ. ಎನ್‌ಇಪಿ ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಉದ್ಘಾಟಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಆಧುನಿಕ ಶಿಕ್ಷಣ ವ್ಯವಸ್ಥೆ ವಿಧಾನವನ್ನು ರೂಪಿಸುತ್ತದೆ.ಹಿಂದಿನ 1986 ಶಿಕ್ಷಣ ನೀತಿಯನ್ನು ಇದು ಬದಲಿಸುತ್ತದೆ. ಈ ನೀತಿಯು ಪ್ರಾಥಮಿಕ ಶಿಕ್ಷಣ ಮಾತ್ರವಲ್ಲದೆ ಉನ್ನತ ಶಿಕ್ಷಣದ ಸಮಗ್ರ ಚೌಕಟ್ಟಾಗಿದೆ. 2040 ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com