ಜಲ ಸಂಪನ್ಮೂಲ ಯೋಜನೆಗಳ ಅನುಷ್ಠಾನಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗೆ ಆದ್ಯತೆ ನೀಡಿ: ಗೋವಿಂದ ಕಾರಜೋಳ ಸೂಚನೆ

ಜಲ ಸಂಪನ್ಮೂಲ ಇಲಾಖೆಯ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಭೂ ಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಬೇಕೆಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಅವರು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ
ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಭೂ ಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಬೇಕೆಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಅವರು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯ ನೀರಾವರಿ ನಿಗಮದಲ್ಲಿ ಇಂದು ನಡೆದ  ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,  ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳ ಅಡಿಯಲ್ಲಿ ಅನುಷ್ಟಾನಗೊಳಿಸುತ್ತಿರುವ ಪ್ರಮುಖ ಯೋಜನೆಗಳಾದ  ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ, ಮಹಾದಾಯಿ, ಕಳಸಾ ಮತ್ತು ಬಂಡೂರು ನಾಲಾ ತಿರುವ ಯೋಜನೆ, ನವಲಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನಾ ಕಾಮಗಾರಿಗಳ  ಪ್ರಸ್ತುತ ಹಂತದ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರಗಳನ್ನು ಚರ್ಚಿಸಿದರು.

ಮೇಕೆದಾಟು ಯೋಜನೆಯ ಪ್ರಸ್ತುತ ಹಂತದ ವಿವರಗಳು ಹಾಗೂ ಕಾನೂನಾತ್ಮಕ ಕ್ರಮಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಿ, ಈ ನಿಟ್ಟಿನಲ್ಲಿ ಅಗತ್ಯ ಪರಿಹಾರ  ನೀಡಲು ನಿಗಮಗಳಡಿ Corpus fund ಸ್ಥಾಪಿಸುವ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಭೂ ಸ್ವಾಧೀನ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಜರುಗಿಸಲು ಪ್ರಮುಖವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಮತ್ತಿತರೆ ಸಂಬಂಧಿತ ಅನೇಕ ಅಧಿಕಾರಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಾಗಿ ಸರ್ಕಾರದ ಅನುಮೋದನೆಗಾಗಿ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.

ಇನ್ನು ಮುಂದೆ ಸೂಕ್ಷ್ಮ ನೀರಾವರಿ ಯೋಜನೆಗಳ ಬದಲಾಗಿ ಫಲಾನುಭವಿ ರೈತರ/ ಸಮೂಹ ರೈತರ ಜಮೀನುಗಳಡಿ ನೀರಿನ ಸಂಗ್ರಹಣ ತೊಟ್ಟಿಗಳನ್ನು ನಿರ್ಮಿಸಿ ನೀರು ಒದಗಿಸುವುದು ಮತ್ತು ಸದರಿ ಸಂಗ್ರಹಣೆಯಿಂದ ರೈತರು ತಮ್ಮ ಸ್ವಂತ ಪೈಪ್ ಲೈನ್ ಅಳವಡಿಕೆಗಳಿಂದ ನೀರಾವರಿಗೆ ನೀರನ್ನು ಬಳಸಲು ಅವಕಾಶಗಳನ್ನು ಕಲ್ಪಿಸುವ ಕುರಿತು ಅಥವಾ ಫಲಾನುಭವಿ ರೈತರ ಸರ್ವೆ ನಂಬರ್ ಗಳಿಗೆ ಸೂಕ್ತ ಓಟ್ ಲೆಟ್ ಗಳನ್ನು ನಿರ್ಮಿಸುವುದು ಮತ್ತು ಅಲ್ಲಿಂದ ರೈತರು ತಮ್ಮ ಹೊಲಗಳಿಗೆ ನೀರನ್ನು ಪಡೆಯುವ ವ್ಯವಸ್ಥೆ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಕೆರೆ ತುಂಬಿಸುವ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಸಫಲತೆ ಕುರಿತಾಗಿ ಯೋಜನೆಗಳ ಮೌಲ್ಯಮಾಪನ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com