ಪಠ್ಯಪುಸ್ತಕವಿಲ್ಲದೆ ಮಕ್ಕಳ ಶಾಲಾ ಹಾಜರಾತಿ ಅರ್ಥಹೀನ: ಹೈಕೋರ್ಟ್

ಪಠ್ಯಪುಸ್ತಕ ವಿತರಿಸದೇ 9 ಹಾಗೂ 10ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳನ್ನು ಆರಂಭ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಆ.30ರೊಳಗೆ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಠ್ಯಪುಸ್ತಕ ವಿತರಿಸದೇ 9 ಹಾಗೂ 10ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳನ್ನು ಆರಂಭ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಆ.30ರೊಳಗೆ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ.

ನಗರದ ವಕೀಲರಾದ ಎ.ಎ. ಸಂಜೀವ್ ನರೈನ್ ಹಾಗೂ ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ವಿಚಾರಣೆ ವೇಳೆ ಪೀಠವು ಸರ್ಕಾರಿ ಪರ ವಕೀಲರಿಗೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರಿ ವಕೀಲರು ಉತ್ತರಿಸಿ, ಹಂತ-ಹಂತವಾಗಿ ಪಠ್ಯ ಪುಸ್ತಕಗಳನ್ನು ಪೂರೈಸಲಾಗುವುದು. ಸೆಪ್ಟಂಬರ್ ಕೊನೆ ವೇಳೆಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠ, ತರಗತಿಗಳು ಆರಂಭವಾಗುವುದಕ್ಕಿಂತ ಮುಂಚೆ ಪಠ್ಯ ಪುಸ್ತಕಗಳ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗಾಗಲೇ ರಾಜ್ಯದಲ್ಲಿ 9 ರಿಂದ 12ನೇ ವರೆಗೆ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಪಠ್ಯ ಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಪ್ರಕ್ರಿಯೆ ಅರ್ಥಹೀನ. ಇದರಿಂದ ಮಕ್ಕಳ ಮತ್ತು ಸರ್ಕಾರದ ಉದ್ದೇಶ ಸಾಫಲ್ಯಗೊಳ್ಳುವುದಿಲ್ಲ. ಆದ್ದರಿಂದ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಪೂರೈಸುವ ವ್ಯವಸ್ಥೆಯ ಕುರಿತು ಆಗಸ್ಟ್ 30ರೊಳಗಿನ ವಸ್ತುಸ್ಥುತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದೇ ರೀತಿ ಪಿಯು ಪಠ್ಯ ಪುಸ್ತಕಗಳು ಸಕಾಲದಲ್ಲಿ ಮತ್ತು ಸುಲಭವಾಗಿ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

ಇದೇ ವೇಳೆ ಆನ್‌ಲೈನ್ ಶಿಕ್ಷಣ ಪದ್ದತಿ ನಡೆಯುತ್ತಿರುವುದರಿಂದ ಸೌಲಭ್ಯವಿಲ್ಲದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಎಲೆಕ್ಟ್ರಾನಿಕ್ ಸಾಧನಗಳನ್ನು ಪೂರೈಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ, ಈಗಾಗಲೇ ಶಾಲೆಗಳು ಪ್ರಾರಂಭಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದರಿಂದ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡಲಾಗದು ಎಂದು ಪೀಠ ಸ್ಪಷ್ಟಪಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com