ಬಾಯ್ಲರ್ ಸ್ಫೋಟ ಪ್ರಕರಣ: ಗಾಯಗೊಂಡಿದ್ದ ಮತ್ತಿಬ್ಬರು ಸಾವು, ಮೃತರ ಸಂಖ್ಯೆ 4ಕ್ಕೆ ಏರಿಕೆ

ಮಾಗಡಿ ರಸ್ತೆಯ ಗೋಪಾಲಯ್ಯಪುರದ 5ನೇ ಅಡ್ಡರಸ್ತೆಯಲ್ಲಿರುವ ಎಂ.ಎಂ.ಫುಡ್ ಪ್ರಾಡಕ್ಟ್ ಘಟಕದಲ್ಲಿ ಸೋಮವಾರ ಸಂಭವಿಸಿದ್ದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮಾಲೀಕ ಸೇರಿದಂತೆ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. 
ಘಟನಾ ಸ್ಥಳದಲ್ಲಿ ಸ್ಥಳೀಯರು ಹಾಗೂ ಪೊಲೀಸರು ಇರುವುದು.
ಘಟನಾ ಸ್ಥಳದಲ್ಲಿ ಸ್ಥಳೀಯರು ಹಾಗೂ ಪೊಲೀಸರು ಇರುವುದು.

ಬೆಂಗಳೂರು: ಮಾಗಡಿ ರಸ್ತೆಯ ಗೋಪಾಲಯ್ಯಪುರದ 5ನೇ ಅಡ್ಡರಸ್ತೆಯಲ್ಲಿರುವ ಎಂ.ಎಂ.ಫುಡ್ ಪ್ರಾಡಕ್ಟ್ ಘಟಕದಲ್ಲಿ ಸೋಮವಾರ ಸಂಭವಿಸಿದ್ದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮಾಲೀಕ ಸೇರಿದಂತೆ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. 

ಎಂ.ಎಂ.ಫುಡ್ ಪ್ರಾಡಕ್ಟ್ ಕಂಪನಿ ಪಾಲುದಾರ ಸಚಿನ್ (41), ಗೋಪಾಲಪುರದ ಧನಲಕ್ಷ್ಮೀ (52) ಮೃತ ದುರ್ದೈವಿಗಳಾಗಿದ್ದಾರೆ. 

ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಕೆಲಸದಾಕೆ ಶಾಂತಿ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಇದೇ ಘಟನೆಯಲ್ಲಿ ಸೋಮವಾರ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಖಾದ್ಯ ತಿನಿಸು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಬಾಯ್ಲರ್ ಸಿಡಿದು ಘಟಕದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಇಬ್ಬರು ಸ್ಥಳದಲ್ಲೇ ಸಜೀವ ದಹನವಾಗಿದ್ದರು. ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಮೂವರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. 

ಘಟನೆಯಲ್ಲಿ ಈ ಹಿಂದೆ ಸಾವನ್ನಪ್ಪಿದ್ದ ಮನೀಶ್ ಕುಮಾರ್ ಹಾಗೂ ಸೌರವ್ ಅವರ ಮರಣೋತ್ತರ ಪರೀಕ್ಷೆ ನಡೆಸಲು ಅವರ ಕುಟುಂಬಸ್ಥರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆಂದು ತಿಳಿದುಬಂದಿದೆ. 

ಘಟನೆ ಬಳಿಕ ಘಟಕದ ಮಾಲೀಕ ವಿಜಯ್ ಮಹ್ತಾ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸಚಿನ್ ಹಾಗೂ ವಿಜಯ್ ಮೆಹ್ತಾ ಇಬ್ಬರೂ ರಾಜಸ್ಥಾನ ಮೂಲದವರಾಗಿದ್ದು, 15 ವರ್ಷಗಳ ಹಿಂದೆ ಇಬ್ಬರೂ ಸೇರಿ ಎಂ.ಎಂ.ಫುಡ್ ಪ್ರಾಡಕ್ಟ್ ಘಟಕವನ್ನು ಆರಂಭಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com