
ಕೆಂಗೇರಿ ಮೆಟ್ರೋ ನಿಲ್ದಾಣ
ಬೆಂಗಳೂರು: ಪಶ್ಚಿಮ ಬೆಂಗಳೂರಿನ ಚಲ್ಲಘಟ್ಟ ಜನತೆಗೆ ಅದೃಷ್ಟವಶಾತ್ ಮೆಟ್ರೋ ಸಂಪರ್ಕ ದೊರೆತಿದೆ. 2 ನೇ ಹಂತದ ಮೆಟ್ರೋ ಮಾರ್ಗ ವಿಸ್ತರಣೆಯಲ್ಲಿ ವಿಳಂಬವಾದರೂ ಚಲ್ಲಘಟ್ಟದಲ್ಲಿ ಮೆಟ್ರೋ ನಿಲ್ದಾಣವನ್ನು ಯೋಜನೆಗೆ ಸೇರಿಸಲಾಗಿದೆ.
ಮೈಸೂರು ರಸ್ತೆ- ಕೆಂಗೇರಿ ಮಾರ್ಗದಲ್ಲಿ ಚಲ್ಲಘಟ್ಟ ಮೆಟ್ರೋ ನಿಲ್ದಾಣ ಯೋಜನೆಯ ಭಾಗವಾಗಿರಲಿಲ್ಲ. ಆದರೆ ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮೆಟ್ರೋ ಡಿಪೋಗೆ ಭೂಮಿ ವಿವಾದ ಉಂಟಾಗಿದ್ದು ಚಲ್ಲಘಟ್ಟಕ್ಕೆ ಮೆಟ್ರೋ ನಿಲ್ದಾಣ ಪಡೆಯುವ ಅದೃಷ್ಟವಾಗಿ ಪರಿಣಮಿಸಿದೆ.
ನಾಡಪ್ರಭು ಕೆಂಪೇಗೌಡ ಲೇಔಟ್ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿಯೇ ಇರಲಿದ್ದು ಈಗಿನ ಕೆಂಗೇರಿ ಮೆಟ್ರೋ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿದೆ. ಹೊಸ, ವಿಸ್ತರಿತ ಮೆಟ್ರೋ ನಿಲ್ದಾಣ ಮಾರ್ಚ್ 2022 ರ ವೇಳೆಗೆ ಪೂರ್ಣಗೊಳ್ಳಲಿದ್ದು ಡಿಪೋ ನಿರ್ಮಾಣ ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮೆಟ್ರೋ ಅಧಿಕಾರಿ ಮಾತನಾಡಿದ್ದು, ಬಿಎಂಆರ್ ಸಿಎಲ್ 2011 ರ ಸೆಪ್ಟೆಂಬರ್ ನಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿದ್ದಾಗ ಡಿಪೋವನ್ನು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ 20 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು.
"ಪ್ರದೇಶವನ್ನು ಮೌಲ್ಯಮಾಪನ ಮಾಡಲು ಮುಂದಾದಾಗ ಆ ಜಾಗವನ್ನು ಅದಾಗಲೇ ಬಿಡಬ್ಲ್ಯುಎಸ್ಎಸ್ ಬಿ ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪಿಸಲು ವಶಕ್ಕೆ ಪಡೆದಿದ್ದು ನಂತರ ತಿಳಿಯಿತು" ಎಂದು ಅಧಿಕಾರಿ ತಿಳಿಸಿದ್ದಾರೆ.
"ಮೆಟ್ರೋ ಅಧಿಕಾರಿಗಳು ಈ ಬಳಿಕ ಡಿಪೋಗಾಗಿ ಪರ್ಯಾಯ ಪ್ರದೇಶಗಳನ್ನು ಕಂಡುಕೊಳ್ಳುವುದಕ್ಕೆ ಕೆಲಸ ಪ್ರಾರಂಭಿಸಿದ್ದರು. ಆಗಲೇ ಈ ಚಲ್ಲಘಟ್ಟದ ಪ್ರದೇಶದಲ್ಲಿ 40 ಎಕರೆ ಜಾಗ ಲಭ್ಯವಿದ್ದದ್ದು ಕಂಡುಬಂದಿತು ಆ ಜಾಗವನ್ನೇ ಡಿಪೋ ನಿರ್ಮಾಣ ಮಾಡುವುದಕ್ಕೆ ಅಂತಿಮಗೊಳಿಸಲಾಯಿತು 2014 ರ ಪರಿಷ್ಕೃತ ಡಿಪಿಆರ್ ನಲ್ಲಿ ಹೊಸ ನಿಲ್ದಾಣ ಹಾಗೂ ಡಿಪೋವನ್ನು ಚಲ್ಲಘಟ್ಟದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಯಿತು" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಪ್ರದೇಶದಲ್ಲಿನ ಅತಿ ಹೆಚ್ಚು ಪ್ರದೇಶ ಅಂದರೆ 18 ಎಕರೆ, 8 ಗುಂಟೆಯಷ್ಟು ಜಾಗವನ್ನು ಬಿಡಿಎದಿಂದ ವಶಕ್ಕೆ ಪಡೆಯಲಾಗಿದೆ. ಪರಿಹಾರದ ವಿಷಯವಾಗಿ ತಿಕ್ಕಾಟವಿತ್ತು 2019 ರಲ್ಲಿ ವಿವಾದ ಇತ್ಯರ್ಥಗೊಂಡಿದೆ.
ಮುಖ್ಯ ಇಂಜಿನಿಯರ್ ಡಿಪೋ ವಿಭಾಗ (ಹಂತ-2) ಬಿಎಂಆರ್ ಸಿಎಲ್ ಯಶವಂತ ಚೌಹಾಣ್ ಈ ಬಗ್ಗೆ ಮಾತನಾಡಿದ್ದು, "ಚಲ್ಲಘಟ್ಟದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಪೂರ್ಣಗೊಳಿಸಲು ಟೆಂಡರ್ ಕರೆಯಲಾಗಿದೆ. ಈ ನಿಲ್ದಾಣ ಮಾರ್ಚ್ 2022 ಕ್ಕೆ ಪೂರ್ಣಗೊಳ್ಳಲಿದ್ದು, ಆ ಬಳಿಕ ಕಾರ್ಯಾಚರಣೆ ಪ್ರಾರಂಭಿಸಲಿದೆ" ಎಂದು ತಿಳಿಸಿದ್ದಾರೆ.