ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಶಕ್ತಿ ನೀಡಮ್ಮ, ಕ್ರೈಂ ನಡೆಯದಂತೆ ಮಾಡು: ಮೈಸೂರು ಚಾಮುಂಡಿಗೆ ಗೃಹ ಸಚಿವ ಮೊರೆ

ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.

ದೇವಿಯ ದರ್ಶನ ಪಡೆದು, ಬಂದಿರುವ ಸಂದಿಗ್ಧತೆಯನ್ನು ನಿವಾರಣೆ ಮಾಡಿಕೊಳ್ಳುವ, ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಶಕ್ತಿಯನ್ನು ನನಗೆ ಮತ್ತು ಪೊಲೀಸ್ ಇಲಾಖೆಗೆ ನೀಡಮ್ಮ ಎಂದು ಚಾಮುಂಡಿ ದೇವಿಯನ್ನು ಪ್ರಾರ್ಥಿಸಿಕೊಂಡಿರುವುದಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೇಳಿದರು.

ಆರೋಪಿಗಳ ಪತ್ತೆ ಸಿಕ್ಕಿಲ್ಲ: ಗ್ಯಾಂಗ್ ರೇಪ್ ನಡೆಸಿದ ಆರೋಪಿಗಳ ಪತ್ತೆ ಸಿಕ್ಕಿಲ್ಲ. ಆರೋಪಿಗಳ ಪತ್ತೆಗೆ ಸ್ವಲ ಸಮಯ ಬೇಕಿದೆ. ಸಂತ್ರಸ್ತೆಯ ಹೇಳಿಕೆ ಪೊಲೀಸರಿಗೆ ಸಿಗಬೇಕಿದೆ. ವಿಚಾರಣೆಗೆ ತೊಂದರೆ ಆಗುವ ದೃಷ್ಟಿಯಿಂದ ನಾನು ಹೆಚ್ಚಿನ ವಿವರ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ನಾಡದೇವತೆ ಚಾಮುಂಡಿಯನ್ನು ಪ್ರಾರ್ಥಿಸಿ ಬಂದಿರುವ ಸಂದಿಗ್ಧತೆಯನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿಯನ್ನು ಪೊಲೀಸರಿಗೆ ನೀಡೆಂದು ಬೇಡಿಕೊಂಡಿರುವೆ. ಅಂತೆಯೇ, ಎಲ್ಲರ ಮನಸ್ಸಿಗೂ ಒಳ್ಳೆಯ ಭಾವನೆ ಕೊಡು ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದನ್ನು ಒಪ್ಪಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಿಎಂ ಅವರಿಗೆ ಅದನ್ನು ಹೇಳುವ ಅಧಿಕಾರ ಇದೆ ಎಂದರು, ಜತೆಗೆ, ಪ್ರಕರಣದ ತನಿಖೆ ಚುರುಕಾಗಿದೆ. ಯಾವ ಹಂತದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುವುದಿಲ್ಲ. ಖಂಡಿತವಾಗಲೂ ಈ ಪ್ರಕರಣವನ್ನು ಬೇಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ಯಾಂಗ್‌ರೇಪ್‌ನ ಆರೋಪಿಗಳ ಗುರುತು ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿದ್ದು, ಯುವತಿಯ ಜತೆಗಿದ್ದ ಯುವಕನಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆಯ ಜತೆಗಿದ್ದ ಯುವಕ ಕೂಡಾ ಸ್ಪಷ್ಟ ಮಾಹಿತಿ ನೀಡುವಲ್ಲಿ ವಿಫಲವಾಗುತ್ತಿದ್ದು, ಪ್ರಕರಣದ ಬಗ್ಗೆ ಪೊಲೀಸರಿಗೆ ಸೂಕ್ತ ಮಾಹಿತಿ ಸಿಗದ ಹಿನ್ನೆಲೆ ಆರೋಪಿಗಳ ಗುರುತು ಪತ್ತೆಯೇ ದೊಡ್ಡ ಸಮಸ್ಯೆಯಾಗುತ್ತಿದೆ. ಆರೋಪಿಗಳ ಚಹರೆ, ಅವರು ಮಾತನಾಡುತ್ತಿದ್ದ ಭಾಷೆ, ಯಾವ ವಾಹನದಲ್ಲಿ ಬಂದಿದ್ದರೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಸದ್ಯ ಯುವಕನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿಲ್ಲ ಎಂದು ಗೃಹ ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com