ಯಾರಿಗೂ ನೋಯಿಸುವ ಉದ್ದೇಶವಿರಲಿಲ್ಲ, ನನ್ನ ಹೇಳಿಕೆ ಹಿಂಪಡೆದಿದ್ದೇನೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಮೈಸೂರು ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಕರಣದ ವಿಚಾರವಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಾವು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.
Published: 27th August 2021 01:07 PM | Last Updated: 27th August 2021 01:07 PM | A+A A-

ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಮೈಸೂರು ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಕರಣದ ವಿಚಾರವಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಾವು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗೂ ನೋವುಂಟು ಮಾಡುವ ಉದ್ದೇಶದಿಂದ ನಾನು ಆ ಹೇಳಿಕೆ ನೀಡಿರಲಿಲ್ಲ. ಈಗಾಗಲೇ ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ಹೇಳಿದ್ದಾರೆ.
'ನಾನು ಮನನೊಂದು ಮಾತನಾಡಿದ್ದೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಹಾಗೂ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದರು. ಇದೇ ವೇಳೆ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯ ಶಾಕ್‌ನಿಂದ ಹೊರ ಬಂದಿಲ್ಲ. ಅವರ ಹೇಳಿಕೆ ಮುಖ್ಯವಾಗುತ್ತದೆ. ಅವರಿನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಪೊಲೀಸರು ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತಾರೆ. ಅಲ್ಲಿವರೆಗೂ ಅವರು ವಿಶ್ರಮಿಸಲ್ಲ. ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸುತ್ತಾರೆ ಎಂದು ಭರವಸೆ ನೀಡಿದರು.
ಅಂತೆಯೇ ನಾನು ಸಂತ್ರಸ್ತೆಯನ್ನು ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆತಂಕದಿಂದ ಆ ಮಾತು ಹೇಳಿದ್ದೇನೆ ಅಷ್ಟೇ. ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ. ವಿರೋಧ ಪಕ್ಷವಾಗಿ ಕಾಂಗ್ರೆಸ್‌ನವರು ಹೇಳಿಕೆ ನೀಡುತ್ತಿದ್ದಾರೆ. ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ. 2014ರಲ್ಲಿ ನಡೆದ ಪ್ರಕರಣದ ನೆನಪು ಮಾಡುವುದಕ್ಕೆ ಇಷ್ಟಪಡುತ್ತೇನೆ. ಮತ್ತೇನು ಹೆಚ್ಚಿಗೆ ಮಾತಾಡಲ್ಲ. ಆ ಮಾತನ್ನು ವಿತ್ ಡ್ರಾ ಮಾಡ್ತಿದ್ದೇನೆ. ಯಾರ ಬಗ್ಗೆನೂ ಕೆಟ್ಟದಾಗಿ ಹೇಳಿಲ್ಲ ಎಂದರು.