ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ವಿಡಿಯೊ ಮಾಡಿ ಬೆದರಿಕೆ ಹಾಕಿದ್ದ ಕಾಮಾಂಧ ಆರೋಪಿಗಳು!

ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅಚ್ಯಾಚಾರ ಮಾಡಿ ಲೈಂಗಿಕ ಹಲ್ಲೆ ನಡೆಸಿದ್ದ ಕಾಮಾಂಧ ದುಷ್ಕರ್ಮಿಗಳು ತಮ್ಮ ಹೇಯ ಕೃತ್ಯವನ್ನು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಪೊಲೀಸರಿಗೆ ದೂರು ನೀಡಿದರೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಅತ್ಯಾಚಾರ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ಅತ್ಯಾಚಾರ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ

ಮೈಸೂರು: ಕಳೆದ ಮಂಗಳವಾರ ಸಾಯಂಕಾಲ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅಚ್ಯಾಚಾರ ಮಾಡಿ ಲೈಂಗಿಕ ಹಲ್ಲೆ ನಡೆಸಿದ್ದ ಕಾಮಾಂಧ ದುಷ್ಕರ್ಮಿಗಳು ತಮ್ಮ ಹೇಯ ಕೃತ್ಯವನ್ನು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಪೊಲೀಸರಿಗೆ ದೂರು ನೀಡಿದರೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

ಈ ಪ್ರಕರಣ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ. ಈ ತಂಡ ನಿನ್ನೆ ಕುಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಸ್ಥಳದಲ್ಲಿ ಪ್ರಮುಖ ಸಾಕ್ಷಿಗಳು ಮತ್ತು 34ಕ್ಕೂ ಹೆಚ್ಚು ವಸ್ತುಗಳು ಸಿಕ್ಕಿದ್ದು ಅವುಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.

ಅಪರಾಧ ನಡೆದ ಸ್ಥಳದಲ್ಲಿ ಮದ್ಯದ ಬಾಟಲ್ ಗಳು ಸಿಕ್ಕಿದ್ದು ಬಾಟಲ್ ನಲ್ಲಿರುವ ಬಾರ್ ಕೋಡನ್ನು ಬಳಸಿ ಅವರು ಯಾವ ಲಿಕ್ಕರ್ ಶಾಪ್ ನಿಂದ ಮದ್ಯವನ್ನು ಖರೀದಿಸಿದ್ದರು, ಎಷ್ಟು ಹೊತ್ತಿಗೆ ಖರೀದಿಸಿದ್ದರು ಎಂದು ನೋಡಿ ಖರೀದಿ ಮಾಡಿದವರನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಅತ್ಯಾಚಾರ ಘಟನೆ ನಡೆಯುವ ಸ್ಥಳದಲ್ಲಿ ಸುತ್ತಮುತ್ತ ಯಾರಾದರೂ ಇದ್ದರೇ, ಆ ಸಮಯದಲ್ಲಿ ಯಾರು ಓಡಾಡುತ್ತಿದ್ದರು ಎಂದು ಕೂಡ ಪತ್ತೆಹಚ್ಚಲು ಪೊಲೀಸರು ಹುಡುಕುತ್ತಿದ್ದಾರೆ.

ಅತ್ಯಾಚಾರದಿಂದ ಗಾಯಕ್ಕೀಡಾಗಿ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದು ಹೇಳಿಕೆ ನೀಡುವ ಸ್ಥಿತಿಗೆ ಬಂದಿಲ್ಲ, ಹೀಗಾಗಿ ಪೊಲೀಸರು ಇನ್ನೂ ಆಕೆಯ ಹೇಳಿಕೆಯನ್ನು ಪಡೆದಿಲ್ಲ. ಇದು ಪೊಲೀಸರ ಆರೋಪಿಗಳ ಹುಡುಕಾಟಕ್ಕೆ ಸ್ವಲ್ಪ ವಿಳಂಬವಾಗುತ್ತಿದೆ. ನಮಗಿನ್ನೂ ಹೇಳಿಕೆ ಸಿಗದಿರುವ ಕಾರಣ ಅದು ದೊಡ್ಡ ಸಮಸ್ಯೆಯಾಗಿದೆ. ಆದರೂ ನಮ್ಮ ಅತ್ಯುತ್ತಮ ತಂಡವನ್ನು ಸಿದ್ದಗೊಳಿಸಿ ತಾಂತ್ರಿಕ ಸಂಸ್ಥೆಗಳ ನೆರವಿನೊಂದಿಗೆ ನಮ್ಮ ಸಿಬ್ಬಂದಿ ರಾಜ್ಯಾದ್ಯಂತ ಜಾಗೃತವಾಗಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಮಂಗಳವಾರ ಸಾಯಂಕಾಲ 7 ಗಂಟೆಯಿಂದ 8.30ರವರೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಫೋನ್ ಟವರ್ ಡಾಟಾವನ್ನು ಪರಿಶೀಲಿಸುತ್ತಿದ್ದಾರೆ. ಅವುಗಳಲ್ಲಿ ಹಲವು ಸಂಖ್ಯೆಗಳನ್ನು ಅಖೈರುಗೊಳಿಸಿ ಆದಷ್ಟು ಶೀಘ್ರ ಆರೋಪಿಗಳ ಪತ್ತೆ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು: ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ಹೋಗಿದ್ದ ಯುವತಿ ಮತ್ತು ಆಕೆಯ ಗೆಳಯನ ಬಳಿಗೆ ಬಂದಿದ್ದ ಪಾನಮತ್ತ ಗುಂಪು ಆರಂಭದಲ್ಲಿ ಹಣದ ಬೇಡಿಕೆಯಿಟ್ಟಿದ್ದರಂತೆ. ಮೊದಲಿಗೆ ಗೆಳೆಯನ ಮೇಲೆ ಹಲ್ಲೆ ನಡೆಸಿ ನಂತರ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿಯ ಸ್ನೇಹಿತೆಯೊಬ್ಬರು ತಿಳಿಸಿದ್ದಾರೆ. ತಮ್ಮ ನೀಚ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ದೂರು ನೀಡಿದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್ ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು.

ಕನ್ನಡದಲ್ಲಿಯೇ ಮಾತನಾಡುತ್ತಿದ್ದ ಆರೋಪಿಗಳು ಮೊದಲಿಗೆ ಹಣಕ್ಕೆ ಬೇಡಿಕೆಯಿಟ್ಟರು, ಆದರೆ ಯುವಕ ಮತ್ತು ಯುವತಿ ನೀಡದಿದ್ದಾಗ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ನಿನ್ನೆ ಆಸ್ಪತ್ರೆಗೆ ಹೋಗಿ ಯುವತಿಯನ್ನು ಭೇಟಿ ಮಾಡಲು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮುಂದಾಗಿದ್ದರು, ಆದರೆ ಭೇಟಿಗೆ ವೈದ್ಯರು ಅವಕಾಶ ನೀಡಲಿಲ್ಲ ಎಂದು ಹೇಳಲಾಗುತ್ತಿದೆ.

ಪೊಲೀಸರು ಹಲವರನ್ನು ಈಗಾಗಲೇ ವಶಕ್ಕೆ ಪಡೆದಿದ್ದು ಅವರ ಬಗ್ಗೆ ಮಾಹಿತಿಯನ್ನು ಹೊರಹಾಕಿಲ್ಲ ಎಂದು ಉನ್ನತ ಮೂಲಗಳು ಹೇಳುತ್ತಿವೆ. ವಿಡಿಯೊ ಆಧಾರದ ಮೇಲೆ ಪೊಲೀಸರು ಇಬ್ಬರಿಂದ ಮೂವರನ್ನು ವಶಕ್ಕೆ ಪಡೆದಿದ್ದು ಅವರನ್ನು ತೀವ್ರ ತನಿಖೆ ನಡೆಸಲಾಗುತ್ತಿದೆ. ಆದರೆ ಎಡಿಜಿಪಿ ಪ್ರತಾಪ್ ರೆಡ್ಡಿಯವರು ಇದನ್ನು ನಿರಾಕರಿಸುತ್ತಿದ್ದಾರೆ. ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ನಂತರ ಹೆಚ್ಚಿನ ವಿವರ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com