ರಾಷ್ಟ್ರೀಯ ಶಿಕ್ಷಣ ನೀತಿ-2020 ಈ ವರ್ಷ ಮೊದಲ ವರ್ಷದ ಪದವಿ ತರಗತಿಗೆ ಆರಂಭ: ಸೆಪ್ಟೆಂಬರ್ ಮೊದಲ ವಾರ ಮಾದರಿ ಪಠ್ಯಕ್ರಮ ಬಹಿರಂಗ

ಮೊದಲ ವರ್ಷದ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ-2020)ಯನ್ನು ಕೆಲ ದಿನಗಳ ಹಿಂದಷ್ಟೇ ಜಾರಿಗೆ ತಂದ ರಾಜ್ಯ ಸರ್ಕಾರ, ಈ ನೀತಿಯಡಿ ಮಾದರಿ ಪಠ್ಯಕ್ರಮವನ್ನು ಅಳವಡಿಸಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೊದಲ ವರ್ಷದ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ-2020)ಯನ್ನು ಕೆಲ ದಿನಗಳ ಹಿಂದಷ್ಟೇ ಜಾರಿಗೆ ತಂದ ರಾಜ್ಯ ಸರ್ಕಾರ, ಈ ನೀತಿಯಡಿ ಮಾದರಿ ಪಠ್ಯಕ್ರಮವನ್ನು ಅಳವಡಿಸಲು ಮುಂದಾಗಿದೆ. ಈ ಮಾದರಿ ಪಠ್ಯಕ್ರಮ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ಬೆಳವಣಿಗೆಗೆ, ಪ್ರತಿ ವಿದ್ಯಾರ್ಥಿಯಲ್ಲಿಯೂ ಸೃಜನಾತ್ಮಕ ಸಾಮರ್ಥ್ಯವನ್ನು ಬೆಳೆಸುವುದು, ಕಲಿಕೆಯ ನಂತರ ಸಮಾಜವನ್ನು, ವೃತ್ತಿಯನ್ನು ಎದುರಿಸಲು ಬೇಕಾದ ಅತ್ಯುನ್ನತ ಗುಣಮಟ್ಟದ ಕ್ಷಮತೆಗೆ ಭದ್ರ ಬುನಾದಿ ಹಾಕುವುದು, ಕೌಶಲ್ಯವನ್ನು ವಿಸ್ತರಿಸುವುದು ಮತ್ತು ಸಾಮರ್ಥ್ಯವನ್ನು ಬೆಳೆಸುವುದು ಈ ನೂತನ ಶಿಕ್ಷಣ ನೀತಿಯ ಉದ್ದೇಶವಾಗಿದ್ದು ಇದು ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು 35 ಉಪ ಸಮಿತಿಗಳನ್ನು ರಚಿಸಲಾಗಿದ್ದು ಹಲವು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ವಿಷಯ ತಜ್ಞರು ಇದಕ್ಕೆ ಸದಸ್ಯರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದ ವೇಳೆ ಹೇಳಿದರು.

ಈಗಿನ ಪಠ್ಯಕ್ರಮವೇ ಮುಂದುವರಿಕೆ: ವಿದ್ಯಾರ್ಥಿಗಳು ಪದವಿಯಲ್ಲಿ ಈಗ ಕಲಿಯುತ್ತಿರುವ ಪಠ್ಯಕ್ರಮವನ್ನೇ ಮುಂದುವರಿಸಲಾಗುತ್ತದೆ. ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ, ಕೇವಲ ಶೇಕಡಾ 10ರಿಂದ 15ರಷ್ಟು ಮಾತ್ರ ಬದಲಾವಣೆ, ಸೇರ್ಪಡೆ ಪಠ್ಯಕ್ರಮದಲ್ಲಿ ಮಾಡಬಹುದಾಗಿದೆ. ಮೂಲ ಅಧ್ಯಾಯ ಹಾಗೆಯೇ ಇರುತ್ತದೆ. ಮಕ್ಕಳಿಗೆ ಈಗಿರುವ ಪಠ್ಯಕ್ರಮದ ಜೊತೆಗೆ ಅವರ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಕೌಶಲ್ಯಗಳು ಮತ್ತು ಸಾಮರ್ಥ್ಯದ ಶಿಕ್ಷಣವನ್ನು ಸೇರಿಸಲಾಗುತ್ತದೆ. ಡಿಜಿಟಲ್ ಶಿಕ್ಷಣ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸೈಬರ್ ಭದ್ರತೆ, ಹೊಸ ತಾಂತ್ರಿಕ ಬೆಳವಣಿಗೆಗಳು ಮತ್ತು ಆರ್ಥಿಕ ಸಾಕ್ಷರತೆಯನ್ನು ಪಠ್ಯಕ್ರಮಕ್ಕೆ ಪೂರಕವಾಗಿ ಸೇರ್ಪಡೆ ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

ಕಾಲೇಜುಗಳಲ್ಲಿ ಸಹಾಯವಾಣಿ, ಹೆಲ್ಪ್ ಡೆಸ್ಕ್ ಸ್ಥಾಪನೆ: ಈ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿರುವುದರಿಂದ ಬಹುತೇಕರಿಗೆ ಅದರ ಪರಿಕಲ್ಪನೆ ಬಗ್ಗೆ ಸ್ಪಷ್ಟ ಅರಿವು, ಮಾಹಿತಿ ಇಲ್ಲ, ಹೀಗಾಗಿ ಪೋಷಕರಿಗೆ, ವಿದ್ಯಾರ್ಥಿಗಳಿಗೆ, ಉಪನ್ಯಾಸಕರು ಮತ್ತು ಇತರ ಸಂಬಂಧಪಟ್ಟವರಿಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮಟ್ಟದಲ್ಲಿ ಉನ್ನತ ಶಿಕ್ಷಣ ಮಂಡಳಿ(ಕೆಎಸ್ ಹೆಚ್ ಇಸಿ)ಯನ್ನು ಕಳೆದ ಆಗಸ್ಟ್ 23ರಂದು ಆರಂಭಿಸಲಾಗಿದ್ದು, ಕಚೇರಿಯಲ್ಲಿ ಉಪನ್ಯಾಸಕರು ಕುಳಿತು ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರಿಸುತ್ತಾರೆ. ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು ಕಾಲೇಜುಗಳಲ್ಲಿ ಸಹಾಯ ಡೆಸ್ಕ್ ಗಳನ್ನು ಆರಂಭಿಸುವಂತೆ ಸೂಚಿಸಲಾಗಿದೆ.

ಉದಾಹರಣೆಗೆ ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಸುಮಾರು 10 ಸಾವಿರ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದೆ. ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಎನ್ ಇಪಿಗೆ ಸಂಬಂಧಪಟ್ಟ ಕಾರ್ಯಾಗಾರಗಳನ್ನು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ನಡೆಸಲು ಸೂಚಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಸ್ವತಃ ಉನ್ನತ ಶಿಕ್ಷಣ ಸಚಿವರಾದ ಅಶ್ವಥ ನಾರಾಯಣ ಅವರೇ ಬೆಂಗಳೂರು, ಮೈಸೂರುಗಳಲ್ಲಿ ಈಗಾಗಲೇ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದು ಮುಂದಿನ ದಿನಗಳಲ್ಲಿ ಧಾರವಾಡ, ಕಲಬುರಗಿ, ಮಂಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕಾಲೇಜುಗಳಲ್ಲಿ ವಾರದ ದಿನಗಳಲ್ಲಿ ಎನ್ ಇಪಿ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಹೇಳಿಕೊಡಲಿದ್ದಾರೆ.

ಪ್ರತಿ ವಿಶ್ವ ವಿದ್ಯಾಲಯಗಳಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಯೂಟ್ಯೂಬ್ ಲೈವ್ ಸೆಷನ್ ಗಳು ತಜ್ಞರಿಂದ ನಡೆಯುತ್ತವೆ, ಫೋನ್ ಇನ್ ಪ್ರೋಗ್ರಾಂ ಮತ್ತು ವಿಷಯದ ಬಗ್ಗೆ ಮಾತನಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಗುರುವಾರ ಸರ್ಕಾರಿ ಕಾಲೇಜು ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು ಎಂದು ಪ್ರದೀಪ್ ಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com