ಮಹಿಳೆಯರಿಗೆ ಕರ್ನಾಟಕ ಸುರಕ್ಷಿತವಲ್ಲ ಎಂದು ಹೇಳುವುದು ಸರಿಯಲ್ಲ: ಡಿಜಿ, ಐಜಿಪಿ ಪ್ರವೀಣ್ ಸೂದ್

ಅತ್ಯಾಚಾರ ಘಟನೆ ನಡೆದಿರುವುದು ದುರಾದೃಷ್ಟಕರ ಸಂಗತಿ. ಆದರೆ, ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಕೆಟ್ಟ ಬಿರುದು ನೀಡುವುದು ಸರಿಯಲ್ಲ ಎಂದು ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ. 
ಪ್ರವೀಣ್ ಸೂದ್
ಪ್ರವೀಣ್ ಸೂದ್

ಬೆಂಗಳೂರು: ಅತ್ಯಾಚಾರ ಘಟನೆ ನಡೆದಿರುವುದು ದುರಾದೃಷ್ಟಕರ ಸಂಗತಿ. ಆದರೆ, ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಕೆಟ್ಟ ಬಿರುದು ನೀಡುವುದು ಸರಿಯಲ್ಲ ಎಂದು ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅಪರಾಧ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಅಪರಾಧದ ಅಂಕಿಅಂಶಗಳು ಹಾಗೂ ಅವುಗಳ ಶಿಕ್ಷೆಯ ಪ್ರಮಾಣದೊಂದಿಗೆ ಹೋಲಿಸಿ ನೋಡಬೇಕಿದೆ ಎಂದು ಹೇಳಿದ್ದಾರೆ. 

ಮೈಸೂರಿನಂತಹ ಸುರಕ್ಷಿತ ನಗರದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಇದು ಕರ್ನಾಟಕ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಸಂಶಯಗಳನ್ನು ಹುಟ್ಟುಹಾಕಿದೆ. ಪೊಲೀಸ್ ಮುಖ್ಯಸ್ಥರಾಗಿ ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ?
ಇಂತಹ ಘಟನೆ ಸಂಭವಿಸಬಾರದಿತ್ತು ನಡೆದಿದೆ. ಆಗಿರುವುದು ದುರಾದೃಷ್ಟಕರ ಸಂಗತಿ. ಕರ್ನಾಟಕದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ. ಹೀಗಾಗಿಯೇ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಕೆಲಸ ಸ್ಥಳಗಳಲ್ಲಿ ಆಱೋಗ್ಯಕರವಾದ ಲಿಂಗ ಸಮಾನತೆಯನ್ನು ಹೊಂದಿದ್ದೇವೆ. ಅಪರಾಧವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ವಿಶ್ವದ ಯಾವುದೇ ನಗರವನ್ನೂ ಸುರಕ್ಷಿತ ನಗರವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಪರಾಧ ಎಲ್ಲಿ ಬೇಕಾದರೂ ಆಗಬಹುದು.

ಪ್ರಕರಣಗಳ ಇತಿಹಾಸಗಳನ್ನು ನೋಡುವುದಾದರೆ, ಶೇ.95ರಷ್ಟು ಅತ್ಯಾಚಾರ ಪ್ರಕರಣಗಳು ನಾಲ್ಕು ಗೋಡೆ, ಮನೆಗಳಲ್ಲಿಯೇ ನಡೆದಿರುತ್ತವೆ. ಇದರಲ್ಲಿ ಶೇ.90ರಷ್ಟು ಪ್ರಕರಣಗಳು ಸಂತ್ರಸ್ತರಿಗೆ ತಿಳಿದಿರುವ ವ್ಯಕ್ತಿಗಳೇ ಆಗಿದ್ದಾರೆ. ಪ್ರಕರಣಗಳ ತನಿಖೆ ನಡೆಸುವುದು, ಚಾರ್ಜ್ ಶೀಟ್ ಸಲ್ಲಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ನಾವು ಶ್ರಮಿಸುತ್ತೇವೆ. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕರ್ನಾಟಕದಲ್ಲಿ ಬಹಳಷ್ಟು ಹೆಚ್ಚಾಗಿದೆ. ಪತ್ತೆಯಾಗದ ಪ್ರಕರಣಗಳು ಒಂದಂಕಿಯಲ್ಲಿವೆ. 

ಅಕ್ಟೋಬರ್ 2012 ರಲ್ಲಿ ನಾಗರಭಾವಿಯಲ್ಲಿ ನಡೆದ ಕಾನೂನು ವಿದ್ಯಾರ್ಥಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು 4-5 ದಿನಗಳಲ್ಲಿ ಪತ್ತೆ ಮಾಡಲಾಗಿತ್ತು. ಒಂದು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿ, ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಒಬ್ಬ ಬಾಲಾಪರಾಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. 

ಜೂನ್ 2013 ರಲ್ಲಿ ಮಣಿಪಾಲ ವಿದ್ಯಾರ್ಥಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಂಟು ದಿನಗಳ ಬಳಿಕ ಆರೋಪಿಗಳನ್ನು ಪತ್ತೆ ಮಾಡಲಾಗಿತ್ತು. ಸೂಕ್ತ ಸಮಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. 2015 ರಲ್ಲಿ ಐವರು ಆರೋಪಿಗಳು ಶಿಕ್ಷೆಗೊಳಗಾದರು. ಅವರಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ಇಬ್ಬರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆ ಸಂದರ್ಭದಲ್ಲಿ ಕೂಡ, ಸಂತ್ರಸ್ತ ಯಾವುದೇ ಹೇಳಿಕೆಯನ್ನು ನೀಡಿಲ್ಲ. ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು ದೂರು ದಾಖಲಿಸಿದ್ದರು. 

ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಪ್ರಕರಣವನ್ನು ಸ್ವಯಂ ಮೇಲ್ವಿಚಾರಣೆ ನಡೆಸುತ್ತಿದ್ದು, ಈ ವೇಳೆ ನೀವು ಮತ್ತು ನಿಮ್ಮ ತಂಡ ಯಾವ ರೀತಿ ಒತ್ತಡಕ್ಕೆ ಸಿಲುಕಿದ್ದಿರಿ? 
ಪೊಲೀಸರ ಕೆಲಸ ಸಾಕಷ್ಟು ಒತ್ತಡದಲ್ಲಿಯೇ ಇರುತ್ತದೆ. ನಾಗರಿಕ ಸಮಾಜದಿಂದ ನಮ್ಮ ರಾಜಕೀಯ ಮುಖಂಡರವರೆಗೂ ಯಾರೂ ನಮ್ಮ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ನಾವು ಅನುವು ಮಾಡಿಕೊಡುವುದಿಲ್ಲ. ಒತ್ತಡಕ್ಕೆ ಸಿಲುಕಿಸಿ ಯಾರನ್ನೂ ಬಂಧನಕ್ಕೊಳಪಡಿಸುವುದಕ್ಕೆ ನಾನು ಒಪ್ಪುವುದಿಲ್ಲ. ತನಿಖೆಯನ್ನು ವೈಜ್ಞಾನಿಕವಾಗಿ ಎಲ್ಲಾ ಸಾಕ್ಷ್ಯಾಧಾರಗಳೊಂದಿಗೆ ವಿಧಿವಿಜ್ಞಾನದ ಆಧಾರದಲ್ಲಿ ನಡೆಸಲಾಗಿದೆಯೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಅಂತಹ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಾವು ಹೈಕೋರ್ಟ್‌ಗೆ ಮನವಿ ಮಾಡಿಕೊಳ್ಳುತ್ತೇವೆ.

ಮೈಸೂರು ಪ್ರಕರಣ ಭೇದಿಸುವಲ್ಲಿ ಯಾವ ಮಿತಿಗಳಿದ್ದವು? 
ಸಂತ್ರಸ್ತ ಯುವತಿಯ ಗೆಳೆಯ ನೀಡಿದ ದೂರಿನ ಆಧಾರದ ಮೇಲೆ ನಾವು ತನಿಖೆ ಆರಂಭಿಸಿದ್ದೆವು. ಯುವತಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆಯ ಪರಿಸ್ಥಿತಿಯನ್ನು ನಾವೂ ಅರ್ಥ ಮಾಡಿಕೊಳ್ಳುತ್ತೇವೆ. ಯುವತಿ ಸಾಕಷ್ಟು ಆತಂಕಕ್ಕೆ ಸಿಲುಕಿರುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಮೇಲೆ ನಾವು ಒತ್ತಡ ಹೇರುವುದಿಲ್ಲ. ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕವಾಗಿ ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ನಾವು ಕಾಯುತ್ತೇವೆ. ಆಕೆಯ ಗೆಳೆಯ ಹೇಳಿಕೆ ನೀಡಿದ್ದಾನೆ. ಆದರೆ, ಸಂಪೂರ್ಣ ಮಾಹಿತಿ ಆತನ ಬಳಿಯೂ ಇರಲಿಲ್ಲ. ಆತನಿಗೂ ಆರೋಪಿಗಳು ಹೊಡೆದಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಹೀಗಾಗಿ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಹೆಚ್ಚು ಅವಲಂಬಿತವಾಗಬೇಕಿದೆ. 

ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಬಳಕೆ ಮಾಡಲಾಗುತ್ತಿರುವ ಹೊಸ ಸಾಧನಗಳನ್ನು ಬಳಸಲಾಗುತ್ತಿದೆ? 
ವಿಧಿವಿಜ್ಞಾನ ಸಾಕ್ಷ್ಯವನ್ನು ಸಂಗ್ರಹಿಸಲು ನಾವು ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಾಧನಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಬೆಂಗಳೂರಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯವನ್ನು (ಎಫ್‌ಎಸ್‌ಎಲ್) ಉನ್ನತೀಕರಿಸಿದ್ದೇವೆ ಮತ್ತು ಪೊಲೀಸರಿಗೆ ಸಹಾಯ ಮಾಡಲು ಜಿಲ್ಲೆಗಳಲ್ಲಿ ಸ್ಯಾಟಲೈಟ್ ಎಫ್‌ಎಸ್‌ಎಲ್‌ಗಳನ್ನು ಸ್ಥಾಪಿಸಿದ್ದೇವೆ. ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಇನ್ನೂ ಎರಡು ಘಟಕಗಳು ಸ್ಥಾಪನೆಗೊಳ್ಳಲಿವೆ. ಅಪರಾಧದ ದೃಶ್ಯದಿಂದ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಅಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಸರ್ಕಾರ 206 ಹುದ್ದೆಗಳನ್ನು ಮಂಜೂರು ಮಾಡಿದೆ. ದೇಶದಲ್ಲೇ ಇಂತಹ ಪ್ರಯತ್ನ ಇದೇ ಮೊದಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com