ಕೆಜಿಎಫ್: 28 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು, ಹಲವು ವಿದ್ಯಾರ್ಥಿಗಳು ಕ್ವಾರಂಟೈನ್

ಕೆಲವೇ ಕೋವಿಡ್-ಪಾಸಿಟಿವ್ ಪ್ರಕರಣಗಳನ್ನು ಕಂಡಿದ್ದ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸಾಂಕ್ರಾಮಿಕ ದಿಢೀರ್ ಸದ್ದು ಮಾಡುತ್ತಿದ್ದು, ಏಕಕಾಲದಲ್ಲಿ 28 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಒಕ್ಕರಿಸಿರುವುದು ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಕೆಲವೇ ಕೋವಿಡ್-ಪಾಸಿಟಿವ್ ಪ್ರಕರಣಗಳನ್ನು ಕಂಡಿದ್ದ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸಾಂಕ್ರಾಮಿಕ ದಿಢೀರ್ ಸದ್ದು ಮಾಡುತ್ತಿದ್ದು, ಏಕಕಾಲದಲ್ಲಿ 28 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಒಕ್ಕರಿಸಿರುವುದು ವರದಿಯಾಗಿದೆ.

ಕೆಜಿಎಫ್‌ನ ನರ್ಸಿಂಗ್ ಕಾಲೇಜಿನಲ್ಲಿ 28 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೋಂಕು ಒಕ್ಕರಿಸಿದ್ದು, ಇವರ ಸಂಪರ್ಕಕ್ಕೆ ಬಂದಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. 

ಈ ಕುರಿತಂತೆ ಮಾಹಿತಿ ನೀಡಿರುವ ಉಪ ಆಯುಕ್ತರಾದ ಡಾ. ಸೆಲ್ವಮಣಿ ಅವರು, ಕಾಲೇಜಿನ ಎಲ್ಲಾ 375 ವಿದ್ಯಾರ್ಥಿಗಳನ್ನು ಪರೀಕ್ಷಿಸಲು ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿಗಳ ಕೋವಿಡ್ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಲು ಆರೋಗ್ಯ ಕಾರ್ಯಕರ್ತರ ತಂಡವನ್ನು ಕೆಜಿಎಫ್ ನ ಆಂಡರ್ಸನ್ ಪೇಟೆಯ ನೂರುನ್ನೀಸಾ ಕಾಲೇಜ್ ಆಫ್ ನರ್ಸಿಂಗ್ ಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಮೂಲಗಳ ಪ್ರಕಾರ ವಿದ್ಯಾರ್ಥಿಗಳು ಕೇರಳದಿಂದ ಬಂದಿದ್ದರು. ತಹಶೀಲ್ದಾರ್ ಮತ್ತು ಆರೋಗ್ಯ ಅಧಿಕಾರಿಗಳಿಗೆ ಅವರ ಆಗಮನ, ಆರ್‌ಟಿ-ಪಿಸಿಆರ್ ವರದಿಗಳು ಮತ್ತು ಇತರ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ತಕ್ಷಣವೇ ಸಲ್ಲಿಸಲು ಸೂಚನೆಗಳನ್ನು ನೀಡಲಾಗಿದೆ. ಪ್ರಸ್ತುತ ಈ ಸೋಂಕಿತ 15 ವಿದ್ಯಾರ್ಥಿಗಳನ್ನು ಬಿಜಿಎಂಎಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಉಳಿದ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ಪ್ರತ್ಯೇಕಿಸಲಾಗಿದೆ. ಅವರ ಸ್ವ್ಯಾಬ್‌ಗಳನ್ನು ಕೂಡ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ ಚಂದನ್  ತಿಳಿಸಿದರು. 

ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕೇರಳ ಮೂಲದ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಿನಗಳ ಹಿಂದೆ ಕೇರಳದಿಂದ ಬಂದ ಮೊದಲನೇ ವರ್ಷದ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ಉಳಿದುಕೊಂಡಿದ್ದರು. ಅವರ ಮೂಲಕ ಇತರರಿಗೂ ಕೋವಿಡ್‌ ಸೋಂಕು ಹರಡಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುನಿಲ್‌ ತಿಳಿಸಿದ್ದಾರೆ.

ಮೊದಲನೇ ವರ್ಷದ 13 ವಿದ್ಯಾರ್ಥಿನಿಯರು ಮತ್ತು ಎರಡನೇ ವರ್ಷದ 15 ವಿದ್ಯಾರ್ಥಿನಿಯರು ಕೋವಿಡ್ ಸೋಂಕಿಗೆ ಒಳಗಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯ ಕೋವಿಡ್ ಪರೀಕ್ಷೆ ಕಾರ್ಯ ಮುಂದುವರೆದಿದೆ. ಕೋವಿಡ್ ಸೋಂಕು ಇರುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಪರೀಕ್ಷಾ ಫಲಿತಾಂಶಗಳು ಬಂದ ನಂತರ ನಿಖರವಾದ ಸೋಂಕುಗಳ ಸಂಖ್ಯೆ ತಿಳಿಯುತ್ತದೆ ಎಂದು ಅವರು ಹೇಳಿದರು. ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು. ಕೆಜಿಎಫ್ ನಗರ ಮುನ್ಸಿಪಲ್ ಆಯುಕ್ತ ನವೀನ್ ಚಂದ್ರ ಅವರು ಕಾಲೇಜಿನ ಸುತ್ತಮುತ್ತಲಿನ ಪ್ರದೇಶಗಳನ್ನು ಸೋಂಕುರಹಿತಗೊಳಿಸಲು ಜನನಿಬಿಡ ಆಂಡರ್ಸನ್ ಪೇಟೆ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಪ್ರಕರಣಗಳು ಕಡಿಮೆಯಾಗುವವರೆಗೆ ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಸಮನ್ವಯದಿಂದ ದಿನಕ್ಕೆರಡು ಬಾರಿ ಪ್ರದೇಶವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 

ತಾಲ್ಲೂಕಿನಲ್ಲಿ ಕೋವಿಡ್ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಇತ್ತು. ಕಳೆದ ಹತ್ತು ದಿನಗಳಿಂದ ಕೇವಲ 15 ಪ್ರಕರಣಗಳು ವರದಿಯಾಗಿದ್ದವು. ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜು ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ ಸೀಲ್ ಡೌನ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com