91 ವರ್ಷದ ಪುರಾತನ ಶಾಲೆ ಮೇಲೆ ರಿಯಲ್ ಎಸ್ಟೇಟ್ ಕಣ್ಣು; ನೆಲಸಮಗೊಳ್ಳುವ ಆತಂಕ!

ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದಿದ್ದೇ ಆದರೆ, ನಗರದಲ್ಲಿರುವ 91 ವರ್ಷದ ಅತ್ಯಂತ ಹಳೆಯ ಸರ್ಕಾರಿ ಶಾಲೆಯೊಂದು ನೆಲಸಮಗೊಳ್ಳುವ ಸಾಧ್ಯತೆಗಳು ಹೆಚ್ಚಾಗಲಿದೆ.
ಸರ್ಕಾರಿ ಶಾಲೆ
ಸರ್ಕಾರಿ ಶಾಲೆ

ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದಿದ್ದೇ ಆದರೆ, ನಗರದಲ್ಲಿರುವ 91 ವರ್ಷದ ಅತ್ಯಂತ ಹಳೆಯ ಸರ್ಕಾರಿ ಶಾಲೆಯೊಂದು ನೆಲಸಮಗೊಳ್ಳುವ ಸಾಧ್ಯತೆಗಳು ಹೆಚ್ಚಾಗಲಿದೆ.

1930ರಲ್ಲಿ ಪ್ರಾರಂಭವಾದ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆಯು ವಿಧಾನಸೌಧದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಅಶೋಕ್ ನಗರದಲ್ಲಿ ಕಮಿಸ್ಸರಿಯಟ್ ರಸ್ತೆಯಲ್ಲಿದೆ. ಈ ಶಾಲೆಯು ಸಾಕಷ್ಟು ವಿದ್ಯಾರ್ಥಿಗಳೂ ಕೂಡ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೀಗ ಶಾಲೆಯಲ್ಲಿ ಕೇವಲ 9 ವಿದ್ಯಾರ್ಥಿಗಳಿದ್ದು, ಓರ್ವ ಶಿಕ್ಷಕರು ಮಾತ್ರ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.

ಶಾಲೆಯು 15,500 ಚದರ ಅಡಿ ಭೂಮಿಯಲ್ಲಿದ್ದು, ಈ ಭೂಮಿಯ ಮೌಲ್ಯವು ಕೋಟ್ಯಾಂತರ ರೂಪಾಯಿಗಳಿವೆ. ಹೀಗಾಗಿ ಈ ಭೂಮಿಯ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣುಬಿದ್ದಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ವತಿಯಿಂದ ಯಾವುದೇ ವೆಚ್ಚಗಳೂ ಇಲ್ಲದೆ ಶಾಲೆಯನ್ನು ಪುನಃ ಸ್ಥಾಪಿಸಲು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಚ್) ಮುಂದೆ ಬಂದಿತ್ತು. ಆದರೆ, ಪ್ರಬಲ ರಿಯಲ್ ಎಸ್ಟೇಟ್ ಲಾಬಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಶಾಲೆ ಪುನಃಸ್ಥಾಪಿಸುವ ಕುರಿತು ಸರ್ಕಾರದಿಂದಲೂ ಕೂಡ ಯಾವುದೇ ರೀತಿಯ ಪ್ರಗತಿಗಳು ಕಂಡು ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಶಾಲೆ ಕುರಿತು  ''ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್'' ಮತ್ತು ''ಕನ್ನಡಪ್ರಭ.ಕಾಂನಲ್ಲಿ'' ಅಕ್ಟೋಬರ್ 27 ರಂದು '1930ರಲ್ಲಿ ಪ್ರಾರಂಭವಾದ ಬೆಂಗಳೂರಿನ ಈ ಸರ್ಕಾರಿ ಶಾಲೆಗೆ 7 ವರ್ಷದಿಂದ ವಿದ್ಯುತ್ ಸಂಪರ್ಕವೇ ಇಲ್ಲ!' ವರದಿಯನ್ನು ಪ್ರಕಟಿಸಲಾಗಿತ್ತು. ವರದಿಯಲ್ಲಿ ಶಾಲೆಯಲ್ಲಿ ಕಳೆದ 7 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲ ಎಂಬುದರ ಕುರಿತು ಬೆಳಕು ಚೆಲ್ಲಲಾಗಿತ್ತು.

ಈ ವರದಿ ಬಳಿಕ ಶಾಲೆಯಲ್ಲಿ ವ್ಯವಸ್ಥೆಗಳನ್ನು ಸರಿಪಡಿಸುವ ಬದಲು, ಸರ್ಕಾರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳನ್ನೇ ಬೇರೆ ಶಾಲೆಗಳಿಗೆ ಸ್ಥಳಾಂತರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಈ ನಡುವೆ ವಿದ್ಯಾರ್ಥಿಗಳ ಸ್ಥಳಾಂತಕ ಕುರಿತು ಪ್ರತಿಕ್ರಿಯೆ ನೀಡಿರುವ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್ ಅವರು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸವುದಕ್ಕೂ ಮುನ್ನ ಪೋಷಕರ ಅಭಿಪ್ರಾಯ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.

1930 ರಲ್ಲಿ ಚಾಮರಾಜಪೇಟೆಯಲ್ಲಿ ಪ್ರಾರಂಭವಾದ ಫೋರ್ಟ್ ಹೈಸ್ಕೂಲ್ ಅನ್ನು ಇತ್ತೀಚೆಗೆ ಪುನಃಸ್ಥಾಪಿಸಲಾಗಿತ್ತು. ಅಶೋಕನಗರ ಶಾಲೆಯನ್ನೂ ಕೂಡ ಪುನಃಸ್ಥಾಪನೆ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಸಂಪರ್ಕಿಸಲಾಗಿತ್ತು. ಈ ಕುರಿತು ರೂ. 27 ಲಕ್ಷ ಅಂದಾಜು ಮೊತ್ತದ ವಿಸ್ತೃತ ಯೋಜನಾ ವರದಿಯನ್ನೂ ಸಲ್ಲಿಸಲಾಗಿತ್ತು. ರೋಟರಿ ಕ್ಲಬ್ ಸಿಎಸ್ಆರ್ ನಿಧಿಯ ಮೂಲಕ ಹಣವನ್ನು ನೀಡಲು ಮುಂದೆ ಬಂದಿತ್ತು, ಆದರೆ ಸರ್ಕಾರದ ವತಿಯಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಮಾತನಾಡಿ, ಶಾಲೆಯು ಅತ್ಯಂತ ಹಳೆಯ ಕಟ್ಟಡವಾಗಿದ್ದು, ಶಾಲೆಯಲ್ಲಿ ಅತ್ಯಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆಂದು ತಿಳಿದುಬಂದಿದೆ. ಶಾಲೆ ಪುನಃಸ್ಥಾಪನೆ ಕುರಿತು ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಯಾರಾದರೂ ನನ್ನನ್ನು ಸಂಪರ್ಕಿಸಿದ್ದೇ ಆದರೆ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಎಂಎಲ್ಸಿ ಚುನಾವಣೆಯಲ್ಲಿ ಕಾರ್ಯನಿರತರಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ, ಡಿಸೆಂಬರ್ 10ರ ನಂತರ ಶಾಲೆಗೆ ಭೇಟಿ ನೀಡುತ್ತೇನೆ. ಶಾಲೆಯನ್ನು ಪುನಃಸ್ಥಾಪಿಸಲಾಗುತ್ತದೆ. ನಂತರ ಕಟ್ಟಡವನ್ನು ಶಾಲೆಯಾಗಿ ಮುಂದುವರೆಸುವುದು ಅಥವಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com