ತಲಕಾವೇರಿ ದೇವಸ್ಥಾನದ ಹೊರಗೆ ಡ್ಯಾನ್ಸ್: ಡಿಕೆಡಿ ಖ್ಯಾತಿಯ ಬೃಂದಾ ಸೇರಿ 3 ಯುವತಿಯರ ವಿರುದ್ದ ಕೊಡವ ಸಮುದಾಯ ಗರಂ

ಕೊಡಗಿನ ತಲಕಾವೇರಿ ಹೊರಭಾಗದಲ್ಲಿ ಡ್ಯಾನ್ಸ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರು ಹುಡುಗಿಯರು ಇದೀಗ ಕೊಡವ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 
ತಲಕಾವೇರಿ ದೇವಸ್ಥಾನ
ತಲಕಾವೇರಿ ದೇವಸ್ಥಾನ

ಮಡಿಕೇರಿ: ಕೊಡಗಿನ ತಲಕಾವೇರಿ ಹೊರಭಾಗದಲ್ಲಿ ಡ್ಯಾನ್ಸ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರು ಹುಡುಗಿಯರು ಇದೀಗ ಕೊಡವ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಬೃಂದಾ ಪ್ರಭಾಕರ್ ಮತ್ತು ಸ್ನೇಹಿತರಾದ ರಾಶಿರಾವ್ ಮತ್ತು ಮೈತ್ರಿ ಕುಮಾರ್ ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದರು. ತಲಕಾವೇರಿ ಹೊರಭಾಗದಲ್ಲಿ ಮೂವರು ಡ್ಯಾನ್ಸ್ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ಅಖಿಲ ಕೊಡವ ಸಮಾಜ ಮತ್ತು ಅಲ್ಲಿನ ನಿವಾಸಿಗಳು ವೀಡಿಯೊವನ್ನು ವಿರೋಧಿಸಿ ಅದನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ.

ಮೂವರು ತಲಕಾವೇರಿ ದೇವಸ್ಥಾನ ಪ್ರವೇಶದ್ವಾರದಲ್ಲಿ ಇನ್ ಸ್ಟಾಗ್ರಾಮ್ ರೀಲ್ ಅನ್ನು ಚಿತ್ರೀಕರಿಸಿದರು. ಜೊತೆಗೆ ಅದನ್ನು ಇನ್ ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದರು. ಈ ಮೂಲಕ ಈ ಯುವತಿಯರು ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಕೊಡವ ಸಮುದಾಯ ಆರೋಪಿಸಿದೆ.

ಯುವತಿಯರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ವೀಡಿಯೊವನ್ನು ಅಳಿಸುವಂತೆ ಒತ್ತಾಯದ ಸಂದೇಶಗಳು ಬರುತ್ತಿವೆ. ಇದಲ್ಲದೆ, ಅಖಿಲ ಕೊಡವ ಸಮಾಜವು ಕ್ಷಮೆಯಾಚಿಸಬೇಕು ಮತ್ತು ವೀಡಿಯೊವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಪೊಲೀಸರಿಗೆ ದೂರು ನೀಡುವ ಎಚ್ಚರಿಕೆಯನ್ನು ನೀಡಿದೆ.

ಈ ಬೆಳವಣಿಗೆಗಳ ನಂತರ, ಹುಡುಗಿಯರು ಕೊಡವ ಸಮುದಾಯ ಮತ್ತು ಕಾವೇರಿ ನದಿಯ ಭಕ್ತರಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಉದ್ದೇಶದಿಂದ ವೀಡಿಯೋ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದು, ಸದ್ಯ ಅದನ್ನು ತೆಗೆದುಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com