ಮಕ್ಕಳಲ್ಲಿ, ಯುವಪೀಳಿಗೆಯವರಲ್ಲಿ ವ್ಯಂಗ್ಯ ಚಿತ್ರಕಲೆ ಕುರಿತಾಗಿ ಆಸಕ್ತಿ ಮೂಡಿಸುವ ಕಾರ್ಟೂನು ಹಬ್ಬ
ಸಮಾಜದ ಆಗುಹೋಗುಗಳನ್ನು, ಇಲ್ಲಿನ ತಪ್ಪು ಒಪ್ಪುಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುವ ವ್ಯಂಗ್ಯಚಿತ್ರಕಲೆ ವಿಶಿಷ್ಟ ಮಾಧ್ಯಮ. ಮಕ್ಕಳಲ್ಲಿ ಹಾಗೂ ಯುವಪೀಳಿಗೆಯವರಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವುದು ಮತ್ತು ಚಿಂತನೆಯನ್ನು ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
Published: 02nd December 2021 06:05 PM | Last Updated: 02nd December 2021 06:27 PM | A+A A-

ಅಹ್ವಾನ ಪತ್ರಿಕೆಯಲ್ಲಿ ಧೀಮಂತ ನಾಯಕರು
ಕುಂದಾಪುರ: ಕರ್ನಾಟಕದ ಹೆಸರಾಂತ ವ್ಯಂಗ್ಯಚಿತ್ರ ಕಲಾವಿದ ಸತೀಶ್ ಆಚಾರ್ಯ ಅವರು ಕಳೆದ 7 ವರ್ಷಗಳಿಂದ ಮಕ್ಕಳಿಗಾಗಿ ಆಯೋಜಿಸಿಕೊಂಡು ಬರುತ್ತಿರುವ 'ಕಾರ್ಟೂನ್ ಹಬ್ಬ' ಕಾರ್ಯಕ್ರಮ ಡಿ.3- ಡಿ.5 ರವರೆಗೆ ಕುಂದಾಪುರದ ಪಾರಿಜಾತ ಹೋಟೆಲ್ ಎದುರು. ನಡೆಯುತ್ತಿದೆ.
ಈ ಬಾರಿಯ ಕಾರ್ಟೂನ್ ಹಬ್ಬದ ವಸ್ತು ವಿಷಯ 'ಮುಂದಿನ 75 ವರ್ಷಗಳು'. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ 75 ವರ್ಷಗಳ ಮುನ್ನೋಟವನ್ನು ನೀಡುವ ಸಲುವಾಗಿ ಈ ವಿಷಯವನ್ನು ಆರಿಸಿಕೊಂಡಿದ್ದಾಗಿ ಸತೀಶ್ ಆಚಾರ್ಯ kannadaprabha.com ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಕಾರ್ಟೂನು ಹಬ್ಬ ಕಾರ್ಯಕ್ರಮದ ಉದ್ಘಾಟನೆಯನ್ನು ಜೆಡಿಎಸ್ ನಾಯಕರಾದ ವೈ.ಎಸ್.ವಿ ದತ್ತಾ ಅವರು ನಡೆಸಿಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ವಿಡಿಯೊ ಮೂಲಕ ಉದ್ಘಾಟನಾ ಸಂದೇಶ ರವಾನಿಸಲಿದ್ದಾರೆ ಎನ್ನುವುದು ವಿಶೇಷ.
ವಿಶೇಷ ಅತಿಥಿಯಾಗಿ ನಟ ಡಾಲಿ ಧನಂಜಯ ಅವರು ಪಾಲ್ಗೊಳ್ಳುತ್ತಿದ್ದಾರೆ. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಕಲರ್ಸ್ ವಾಹಿನಿಯ ಸೂಪರ್ ವೈಸಿಂಗ್ ಪ್ರೊಡ್ಯೂಸರ್ ಡಾ.ವೆಂಕಿ, ಚಿತ್ರ ನಿರ್ಮಾಪಕ ಕಾರ್ತಿಕ್ ಗೌಡ, ಕಾಂಗ್ರೆಸ್ ನಾಯಕ ಸುಧೀಂಧ್ರ ಕುಮಾರ್ ಮುರೊಳ್ಳಿ, ಬಿಜೆಪಿ ನಾಯಕ ಕಿಶೋರ್ ಕುಮಾರ್ ಮತ್ತಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ ಅವರಿಂದ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ಕಲಾನಮ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣಕನ್ನಡದ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಾಡಿನಾದ್ಯಂತ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ವೇಳೆ ಕುಂದಾಪುರ ಜಿಲ್ಲೆಯ ಆಯ್ದ ಕೊರೊನಾ ಯೋಧರಿಗೆ ಗೌರವ ಸಲ್ಲಿಸಲಾಗುತ್ತಿದೆ.
ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಕ್ಯಾರಿಕೇಚರ್ ಕಾರ್ಯಾಗಾರ ಹಮ್ಮಿಕೊಂಡಿದ್ದು, ನಾಡಿನ ಖ್ಯಾತ ಕಲಾವಿದರಾದ ಬಿ.ಜಿ ಗುಜ್ಜಾರಪ್ಪ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಜನಾರ್ಧನ್ ಮರವಂತೆ ಕಾರ್ಯಾಗಾರ ಉದ್ಘಾಟಿಸಲಿದ್ದು, ನಂಜುಂಡಸ್ವಾಮಿ ವೈ ಎಸ್ ಅವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಸಮಾಜದ ಆಗುಹೋಗುಗಳನ್ನು, ಇಲ್ಲಿನ ತಪ್ಪು ಒಪ್ಪುಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುವ ವ್ಯಂಗ್ಯಚಿತ್ರಕಲೆ ವಿಶಿಷ್ಟ ಮಾಧ್ಯಮ. ಮಕ್ಕಳಲ್ಲಿ ಹಾಗೂ ಯುವಪೀಳಿಗೆಯವರಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವುದು ಮತ್ತು ಚಿಂತನೆಯನ್ನು ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.