ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ರಕ್ಷಣೆ ಮಾಡಬೇಕು, ನಿರ್ವಹಣೆ ಅರಣ್ಯ ಇಲಾಖೆಯದ್ದೇ ಎಂದ ಕರ್ನಾಟಕ ಹೈಕೋರ್ಟ್

ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈ ಕೋರ್ಟ್ ಅರಣ್ಯ ಇಲಾಖೆಗೆ ಅದರ ನಿರ್ವಹಣಾ ಮೇಲುಸ್ತುವಾರಿ ನೀಡಿದೆ.
ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ
ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ

ಬೆಂಗಳೂರು: ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈ ಕೋರ್ಟ್ ಅರಣ್ಯ ಇಲಾಖೆಗೆ ಅದರ ನಿರ್ವಹಣಾ ಮೇಲುಸ್ತುವಾರಿ ನೀಡಿದೆ.

ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶ ರದ್ದು ಪಡಿಸುವಂತೆ ಕೋರಿ ಯಲಹಂಕ ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಟ್ರಸ್ಟ್ ಮತ್ತು ಸ್ಥಳೀಯ ನಿವಾಸಿಗಳು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ವಿಭಾಗೀಯ ಪೀಠವು, 'ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಮುಖ್ಯ ವನ್ಯಜೀವಿ ವಾರ್ಡನ್ ಸಮರ್ಥ ಅಧಿಕಾರಿಯಾಗಿರುವುದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಯಾವುದೇ ಸಮರ್ಥನೆ ನಮಗೆ ಕಂಡುಬಂದಿಲ್ಲ ಎಂದು ಹೇಳಿದೆ.

ಅಂತೆಯೇ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಡಿಸೆಂಬರ್ 11, 2019 ರ ಅಧಿಸೂಚನೆಯನ್ನು ರದ್ದುಗೊಳಿಸಿ,  ಮೀಸಲು ನೋಡಿಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿತು. ಅಲ್ಲದೆ ಮೀಸಲು ಪ್ರದೇಶದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಮೀಸಲಿಟ್ಟಿರುವ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ, ಪಕ್ಷಿಗಳು,  ಗೂಡುಗಳು, ಅವುಗಳ ಮರಿ, ಮೊಟ್ಟೆಗಳನ್ನು ಸಂರಕ್ಷಿಸಲು ಸೂಕ್ತ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿತು. 

ಸಸ್ಯ ಮತ್ತು ಪ್ರಾಣಿಗಳ ಸುರಕ್ಷತೆಗಾಗಿ ಪುಟ್ಟೇನಹಳ್ಳಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಕೊಳಚೆನೀರು ಸೋರಿಕೆಯಾಗುವುದನ್ನು ತಡೆಯಲು / ನಿಲ್ಲಿಸಲು ಎಲ್ಲಾ ಸಮರ್ಪಕ ಮತ್ತು ಸಂಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು BWSSB ಗೆ ನಿರ್ದೇಶನ ನೀಡಿದೆ. BWSSB ಮುಖ್ಯ ವನ್ಯಜೀವಿ ವಾರ್ಡನ್‌ನ ಸಹಯೋಗದೊಂದಿಗೆ ಅಭಯಾರಣ್ಯಕ್ಕೆ ಸರಿಯಾದ ನಿರ್ವಹಣೆ ಮತ್ತು ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಭೇಟಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮೀಸಲು ಪ್ರದೇಶದಲ್ಲಿ ಅಗತ್ಯ ಕೆಲಸಗಳು ನಡೆಯುತ್ತಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com