ತಮಿಳುನಾಡು ನದಿ ಜೋಡಣೆ ಯೋಜನೆಗೆ ಒಪ್ಪಿಗೆ ನೀಡಬೇಡಿ: ಕೇಂದ್ರಕ್ಕೆ ಸಿಎಂ ಬೊಮ್ಮಾಯಿ ಆಗ್ರಹ

ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡುವವರೆಗೆ ತಮಿಳುನಾಡಿನ ಅಂತರ್‌ರಾಜ್ಯ ಕಾವೇರಿ-ವೆಲ್ಲಾರು-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೇಕೆದಾಟು
ಮೇಕೆದಾಟು

ಬೆಂಗಳೂರು: ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡುವವರೆಗೆ ತಮಿಳುನಾಡಿನ ಅಂತರ್‌ರಾಜ್ಯ ಕಾವೇರಿ-ವೆಲ್ಲಾರು-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿರುವ ಸಿಎಂ ಬೊಮ್ಮಾಯಿ ಅವರು ಗುರುವಾರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಶೇಖಾವತ್ ಅವರೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹಲವು ನೀರಿನ ಯೋಜನೆಗಳ ಕುರಿತು ಚರ್ಚೆ ನಡೆಸಿದರು.

ಮಾತುಕತೆ ವೇಳೆ ತಮಿಳುನಾಡಿನ ಅಂತರ್‌ರಾಜ್ಯ ಕಾವೇರಿ-ವೆಲ್ಲಾರು-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಗೆ ಒಪ್ಪಿಗೆ ನೀಡಬಾರದು ಹಾಗೂ ಗೋದಾವರಿ-ಕೃಷ್ಣಾ-ಮಹಾನದಿ-ಕಾವೇರಿ ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕರ್ನಾಟಕ ಸರ್ಕಾರದೊಂದಿಗೆ ಸಮಾಲೋಚಿಸದೆ ಮುಂದುವರಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.

ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಕೇಂದ್ರ ಜಲಶಕ್ತಿ ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ತಮಿಳುನಾಡಿನ ನದಿ ಜೋಡಣೆ ಯೋಜನೆಯ ಬಗ್ಗೆ ಕೇಂದ್ರ ಸಚಿವರ ಜೊತೆಗೆ ಚರ್ಚೆ ನಡೆಸಿದ್ದೇನೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವವರೆಗೆ ಯೋಜನೆಗೆ ಅನುಮತಿ ನೀಡದಂತೆ ಒತ್ತಾಯಿಸಿದ್ದೇನೆಂದು ಹೇಳಿದರು.

260-ಕಿಮೀ ಕಾವೇರಿ-ವೆಲ್ಲಾರು-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಯು ತಮಿಳುನಾಡಿನ ಕೆಲವು ಪ್ರದೇಶಗಳಿಗೆ ಸುಮಾರು 45 ಟಿಎಂಸಿಎಫ್‌ಟಿ ನೀರನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಹಲವು ತಿಂಗಳ ಹಿಂದೇಯ ಈ ವಿಚಾರವಾಗಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಧ್ವನಿ ಎತ್ತಿದ್ದು, ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯನ್ನೂ ಸಲ್ಲಿಸಿದೆ. ಯೋಜನೆಗೆ ತಡೆಯಾಜ್ಞೆ ನೀಡುವಂತೆಯೂ ಮನವಿ ಮಾಡಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ಈ ವಿಚಾರವನ್ನು 2022ರ ಜನವರಿ ತಿಂಗಳಿನಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ, ಈ ಯೋಜನೆಯು ಕನಕಪುರ ಬಳಿ ಸಮತೋಲನ ಜಲಾಶಯವನ್ನು ನಿರ್ಮಿಸುವ ಬಹುಪಯೋಗಿ (ಕುಡಿಯುವ ಮತ್ತು ವಿದ್ಯುತ್) ಯೋಜನೆಯಾಗಿದೆ ಎಂದು ಎಂದು ಕರ್ನಾಟಕ ವಾದಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com