ಸರ್ಕಾರ ಕಟ್ಟಿಕೊಡುತ್ತದೆ ಎಂದು ಕಾದಿದ್ದೇ ಬಂತು: ಸುಸ್ತಾಗಿ ತಾವೇ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾದ ಮೈಸೂರಿನ ಸೈಯದ್ ಇಸಾಕ್

ಸರ್ಕಾರ ನೀಡುವ ಭರವಸೆ ಹಲವು ಸಂದರ್ಭಗಳಲ್ಲಿ ಭರವಸೆಗಳಾಗಿಯೇ ಉಳಿಯುತ್ತವೆ. ಸರ್ಕಾರ ಮಾಡಿಕೊಡುತ್ತದೆ ಎಂದು ನಂಬಿದವರಿಗೆ ಹಲವು ಸಲ ನಿರಾಶೆಯಾಗುವುದುಂಟು.
ಗ್ರಂಥಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸೈಯದ್ ಇಸಾಕ್
ಗ್ರಂಥಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸೈಯದ್ ಇಸಾಕ್

ಮೈಸೂರು: ಸರ್ಕಾರ ನೀಡುವ ಭರವಸೆ ಹಲವು ಸಂದರ್ಭಗಳಲ್ಲಿ ಭರವಸೆಗಳಾಗಿಯೇ ಉಳಿಯುತ್ತವೆ. ಸರ್ಕಾರ ಮಾಡಿಕೊಡುತ್ತದೆ ಎಂದು ನಂಬಿದವರಿಗೆ ಹಲವು ಸಲ ನಿರಾಶೆಯಾಗುವುದುಂಟು. ಅದೇ ರೀತಿ ಇಲ್ಲಿ ಸರ್ಕಾರ ಮಾಡಿಕೊಡುತ್ತದೆ ಎಂದು ಇಷ್ಟು ದಿನಗಳ ಕಾಲ ಕಾದು ಸುಸ್ತಾಗಿ ಕೊನೆಗೆ ತಾವೇ ಗ್ರಂಥಾಲಯ ಸ್ಥಾಪಿಸಲು ಮುಂದಾಗಿದ್ದಾರೆ ಮೈಸೂರಿನ 62 ವರ್ಷದ ಕೂಲಿ ಕಾರ್ಮಿಕ ಸೈಯದ್ ಇಸಾಕ್.(Syed Issaq)

ಮೈಸೂರಿನ ರಾಜೀವ್ ನಗರ ಮತ್ತು ಶಾಂತಿನಗರದಲ್ಲಿ ಜನಪ್ರಿಯ ಬಹಳ ಪರಿಚಯ ಇರುವ ವ್ಯಕ್ತಿ ಸೈಯದ್ ಇಸಾಕ್. ಕಳೆದ ಏಪ್ರಿಲ್ 9ರಂದು 11 ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದ್ದ ಅವರ ಸಾರ್ವಜನಿಕ ಗ್ರಂಥಾಲಯ(Public library) ಯಾರೋ ಹಚ್ಚಿ ಬಿಸಾಕಿ ಹೋದ ಒಂದು ಸಿಗರೇಟಿನ ಬೆಂಕಿ ಕಿಡಿಯಿಂದ ಸುಟ್ಟು ಕರಕಲಾಗಿ ಹೋಗಿತ್ತು. ನಂತರ ಅದು ಪತ್ರಿಕೆಯಲ್ಲಿ ಸುದ್ದಿಯಾಗಿತ್ತು.

ತಮಗೆ ವಿದ್ಯಾಭ್ಯಾಸವಿಲ್ಲ, ವಿದ್ಯೆ ಇಲ್ಲದಿದ್ದರೆ ಜನ ಎಷ್ಟು ಕಷ್ಟಪಡುತ್ತಾರೆ ಎಂದು ಸಮಸ್ಯೆ ಅರಿತಿದ್ದ ಇಸಾಕ್ ತಮ್ಮ ಸ್ವಂತ ದುಡಿಮೆಯಿಂದ ಸಣ್ಣ ಜಾಗದಲ್ಲಿ ತಮ್ಮ ಮನೆಯ ಹತ್ತಿರ ಪಾರ್ಕ್ ವೊಂದರ ಮೂಲೆಯಲ್ಲಿ ಗ್ರಂಥಾಲಯ ಸ್ಥಾಪಿಸಿದ್ದರು. ಅಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳ ಪುಸ್ತಕಗಳು ಸಾರ್ವಜನಿಕರಿಗೆ ಓದಲು ಅನುಕೂಲವಾಗುತ್ತಿದ್ದವು. 

ವರದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿದ್ದನ್ನು ಓದಿದ್ದ ಫತಹೀನ್ ಮಿಸ್ಬಾ ಎಂಬ ಟೆಕ್ಕಿಯೊಬ್ಬರು ಆನ್ ಲೈನ್ ನಲ್ಲಿ ಹಣ ಸಂಗ್ರಹಿಸುವಂತೆ ಮನವಿ ಮಾಡಿ ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಕೇವಲ ಮೂರ್ನಾಲ್ಕು ದಿನಗಳಲ್ಲಿ 29 ಲಕ್ಷ ರೂಪಾಯಿ ಸಂಗ್ರಹವಾಗಿತ್ತು.

ಆದರೆ ಇದು ಸರ್ಕಾರದ ಗಮನಕ್ಕೆ ಬಂದು ಸೈಯದ್ ಇಸಾಕ್ ಅವರ ಅದ್ಭುತ ಸಮಾಜ ಸೇವೆಯನ್ನು ಕಂಡು ಸರ್ಕಾರವೇ ಗ್ರಂಥಾಲಯ ಕಟ್ಟಿಸಿಕೊಡುತ್ತದೆ ಎಂದು ಪ್ರಕಟಿಸಿ ಹಣ ಕೊಟ್ಟವರಿಗೆ ವಾಪಸ್ ಮಾಡಲಾಯಿತು.

ಆದರೆ ಅದಾಗಿ ಈಗ ತಿಂಗಳುಗಳೇ ಕಳೆದಿವೆ. ಸರ್ಕಾರದಿಂದ ಗ್ರಂಥಾಲಯ ನಿರ್ಮಿಸಿಕೊಡುವ ಲಕ್ಷಣ ಕಾಣುತ್ತಿಲ್ಲ. ಎಂಸಿಸಿ,(MCC) ಮೂಡಾ,(MUDA) ಹಾಗೂ ಮೈಸೂರು ಜಿಲ್ಲಾಡಳಿತ ಸುಮ್ಮನೆ ಕೈಕಟ್ಟಿ ಕುಳಿತಿವೆ. ಸಾರ್ವಜನಿಕರು ತಮ್ಮ ಇಚ್ಛಾನುಸಾರ ಸೈಯದ್ ಅವರಿಗೆ ಕಳುಹಿಸಿರುವ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸೈಯದ್ ಅವರ ಬಳಿಯಲ್ಲಿ ಸುಮ್ಮನೆ ಬೆಚ್ಚಗೆ ಕುಳಿತಿವೆ.

ಸೈಯದ್ ಅವರಿಗೆ ಇನ್ನು ಕಾಯಲು ತಾಳ್ಮೆಯಿಲ್ಲ. ಗ್ರಂಥಾಲಯ ಅಧಿಕಾರಿಗಳನ್ನು ಕೇಳಿದರೆ ಕಟ್ಟಡಕ್ಕೆ ಸದ್ಯದಲ್ಲಿಯೇ ಶಂಕುಸ್ಥಾಪನೆ ನೆರವೇರಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಪತ್ರಿಕೆಗಳಿಂದ ಪುಸ್ತಕಗಳನ್ನು ಮುಚ್ಚಿ ಸದ್ಯ ನಾನು ಜನರಿಗೆ ಓದಲು ಇಡುತ್ತಿದ್ದೇನೆ. ನನಗೆ ಈಗ ಸರ್ಕಾರದ ಮೇಲೆ ಭರವಸೆ ಉಳಿದಿಲ್ಲ, ಹೀಗಾಗಿ ನಾನೇ ಗ್ರಂಥಾಲಯ ನಿರ್ಮಿಸಲು ಮುಂದಾಗಿದ್ದೇನೆ. ಶೆಡ್ ನಿರ್ಮಾಣ ಮಾಡಿ ಸಿಸಿಟಿವಿ ಇಟ್ಟು ಗ್ರಂಥಾಲಯ ಕಡೆ ಜನರನ್ನು ಆಕರ್ಷಿಸುತ್ತೇನೆ ಎನ್ನುತ್ತಾರೆ ಇಸಾಕ್, ನಿನ್ನೆ ಗ್ರಂಥಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿಸಿದ್ದಾರೆ.

ಗ್ರಂಥಾಲಯ ನಿರ್ಮಿಸಲು ತಮ್ಮ ಕೈಲಾದ ಹಣ ಸಹಾಯ ಮಾಡುತ್ತೇವೆ ಎಂದು ಹೇಳಿದ ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಆಗಿ ಬೇರೆ ಕಡೆ ಹೋಗಿದ್ದಾರೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಗ್ರಂಥಾಲಯಕ್ಕೆ ಜಾಗ ಕೊಟ್ಟಿರುವುದರಿಂದ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ. ಈಗ ಮೈಸೂರು ಮಹಾನಗರ ಪಾಲಿಕೆಯಿಂದ(MCC)ಹಣದ ನೆರವಿಗೆ ಎದಿರು ನೋಡುತ್ತಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.

ಈ ಮಧ್ಯೆ ಕಳೆದ ಏಪ್ರಿಲ್ ನಲ್ಲಿ ಹಣ ಸಂಗ್ರಹಿಸಿದ್ದ ಟೆಕ್ಕಿ ಫತಹೀನ್ ಮಿಸ್ಬಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿ, ಕರ್ನಾಟಕ ಬಗ್ಗೆ ಒಲವು, ಕನ್ನಡ ಭಾಷೆ ಮೇಲಿನ ಒಲವಿನಿಂದ ಮೈಸೂರಿನಿಂದ ಸಂಬಂಧಪಟ್ಟ ನಾಗರಿಕರ ಗುಂಪನ್ನು ರಚಿಸುವ ಮೂಲಕ ಗ್ರಂಥಾಲಯವನ್ನು ಮರುನಿರ್ಮಾಣ ಮಾಡುವ ಉದಾತ್ತ ಉದ್ದೇಶದಿಂದ ಹಣವನ್ನು ಸಂಗ್ರಹಿಸಲಾಗಿದೆ. ಆದರೆ, ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದರಿಂದ ನಾಗರಿಕರಿಂದ ಪಡೆದ ಹಣ ವಾಪಸ್ ಮಾಡಿದೆವು. ಈಗ ಈ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಇದೀಗ ಇಸಾಕ್ ಅವರೇ ತಮ್ಮ ಕನಸುಗಳ ಸಾಕಾರಕ್ಕೆ ಮುಂದಾಗಿರುವುದು ನೋಡಿದರೆ ಖುಷಿಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com