ಬೆಳಗಾವಿ ಸುರಕ್ಷಿತವಾಗಿದ್ದು, ನಿಗದಿತ ವೇಳಾಪಟ್ಟಿಯಂತೆಯೇ ಅಧಿವೇಶನ ನಡೆಸಲಾಗುತ್ತದೆ: ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರಿನಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾದ ಬಳಿಕ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಈ ನಡುವೆ ಚಳಿಗಾಲ ಅಧಿವೇಶನ ಕುರಿತ ಊಹಾಪೋಹಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾದ ಬಳಿಕ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಈ ನಡುವೆ ಚಳಿಗಾಲ ಅಧಿವೇಶನ ಕುರಿತ ಊಹಾಪೋಹಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ.

ಓಮಿಕ್ರಾನ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ಬೆಳಗಾವಿ ಸುರಕ್ಷಿತವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ನಿಗದಿಪಡಿಸಿದ ವೇಳಾಪಟ್ಟಿಯಂತೆಯೇ ಡಿಸೆಂಬರ್ 13 ರಿಂದ 24 ರವರೆಗೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು, ತಜ್ಞರ ಸಮಿತಿ ಸಬೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಸಚಿವ ಆರ್.ಅಶೋಕ್ ಅವರು, ಡಿ.13ರಿಂದ 24 ರವರೆಗೆ ಬೆಳಗಾವಿಯಲ್ಲೇ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಓಮಿಕ್ರಾನ್ ಸೋಂಕು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಹೀಗಾಗಿ ನಿಗದಿಯಂತೆ ಬೆಳಗಾವಿಯಲ್ಲೇ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ನಡುವೆ ಬೆಳಗಾವಿ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯವಿತ್ತು. ಆದರೆ, ಕಳೆದ ಎರಡು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ರದ್ದುಗೊಳಿಸಲಾಗಿತ್ತು. ಹೀಗಾಗಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಬೆಳಗಾವಿಯಲ್ಲಿಯೇ ಅಧಿವೇಶನಕ್ಕೆ ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com