ವರ್ಷಕ್ಕೆ 8 ಅಂತಾರಾಷ್ಟ್ರೀಯ ಮಟ್ಟದ ಟೆಕ್ ಸಮಿಟ್ ಆಯೋಜನೆ: ಸಚಿವ ಅಶ್ವತ್ ನಾರಾಯಣ್ ಘೋಷಣೆ
ಉದ್ಯಮ ಕ್ಷೇತ್ರಗಳ ಅಗತ್ಯಗಳಿಗೆ ಸ್ಪಂದಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಪ್ರತಿ ವರ್ಷ ಕನಿಷ್ಠ ಎಂಟು ಅಂತಾರಾಷ್ಟ್ರೀಯ ಟೆಕ್ ಸಮಿಟ್ ಗಳನ್ನು ನಡೆಸುವುದಾಗಿ ಘೋಷಿಸಿದೆ.
Published: 04th December 2021 08:48 AM | Last Updated: 04th December 2021 08:48 AM | A+A A-

ಅಸೋಚಮ್ ಹಮ್ಮಿಕೊಂಡಿದ್ದ `ಸ್ಮಾರ್ಟ್ ಟೆಕ್ ಇಂಡಿಯಾ-2021’ ಸಮಾವೇಶದಲ್ಲಿ ಸಚಿವ ಅಶ್ವತ್ಥ್ ನಾರಾಯಣ್.
ಬೆಂಗಳೂರು: ಉದ್ಯಮ ಕ್ಷೇತ್ರಗಳ ಅಗತ್ಯಗಳಿಗೆ ಸ್ಪಂದಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಪ್ರತಿ ವರ್ಷ ಕನಿಷ್ಠ ಎಂಟು ಅಂತಾರಾಷ್ಟ್ರೀಯ ಟೆಕ್ ಸಮಿಟ್ ಗಳನ್ನು ನಡೆಸುವುದಾಗಿ ಘೋಷಿಸಿದೆ.
ನಗರದಲ್ಲಿ ಅಸೋಚಮ್ ಹಮ್ಮಿಕೊಂಡಿದ್ದ `ಸ್ಮಾರ್ಟ್ ಟೆಕ್ ಇಂಡಿಯಾ-2021’ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್ ಅವರು, ಮುಂದಿನ ದಿನಗಳಲ್ಲಿ ಸ್ಮಾರ್ಟ್ ಟೆಕ್ ಶೃಂಗಸಭೆಯನ್ನು ಬೆಂಗಳೂರಿನಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ.
ನೂತನ ಶಿಕ್ಷಣ ನೀತಿಯನ್ನು ಉದ್ಯೋಗ ಮತ್ತು ಕೌಶಲಕೇಂದ್ರಿತವನ್ನಾಗಿ ಮಾಡಲಾಗಿದ್ದು, ಶಿಕ್ಷಣ ಸಂಸ್ಥೆಗಳೊಂದಿಗೆ ಉದ್ದಿಮೆಗಳನ್ನು ಬೆಸೆಯಲಾಗುತ್ತಿದೆ. ಇವು ಕೇವಲ ಕ್ಯಾಂಪಸ್ ಸಂದರ್ಶನದ ಸಮಯವಲ್ಲದೆ ಇನ್ನುಮುಂದೆ ಇಡೀ ಶೈಕ್ಷಣಿಕ ವರ್ಷದುದ್ದಕ್ಕೂ ವಿದ್ಯಾಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿವೆ ಎಂದು ಹೇಳಿದರು.
“ತಂತ್ರಜ್ಞರು ಮತ್ತು ನವೋದ್ಯಮಿಗಳು ನಿಜವಾದ ಹೀರೋಗಳಾಗಿದ್ದು, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನುರಿತ ಸಂಪನ್ಮೂಲಗಳ ಅವಶ್ಯಕತೆಯಿದೆ ಎಂಬುದನ್ನು ಕೋವಿಡ್ ಪರಿಸ್ಥಿತಿಯು ಸಾಬೀತುಪಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಭವಿಷ್ಯದ ನಾಗರಿಕರಿಗೆ ವಿದ್ಯಾರ್ಥಿ ಹಂತದಲ್ಲಿಯೇ ಕೌಶಲ್ಯಗಳನ್ನು ನೀಡಲಿದ್ದು, ಉದ್ಯಮದ ಅಗತ್ಯತೆಗಳಲ್ಲಿನ ಅಂತರವನ್ನು ಇದು ತುಂಬಲಿದೆ ಎಂದು ತಿಳಿಸಿದರು.
ವಿದೇಶಿ ಭಾಷಾ ಕೇಂದ್ರ
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶೀಘ್ರವೇ ವಿದೇಶಿ ಭಾಷಾ ಕಲಿಕಾ ಕೇಂದ್ರ ಆರಂಭಿಸಲಾಗುವುದು ಎಂದು ಶುಕ್ರವಾರ ನಡೆದ ಕಾರ್ಯಕ್ರಮವೊಂದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಘೋಷಿಸಿದರು.
ಅಂತರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಕ್ಯಾಂಪಸ್ ಅಭಿವೃದ್ಧಿ ಪಡಿಸಲಾಗುವುದು ಎಂದ ಸಚಿವರು, ರಾಜ್ಯದ ಎಲ್ಲಾ 430 ಸರ್ಕಾರಿ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.