ಸಂಚಾರ ನಿಯಮ ಉಲ್ಲಂಘಿಸುವವರಿಗೆ ಎಸ್ಎಂಎಸ್ ಮೂಲಕ ನೋಟಿಸ್ ರವಾನೆ!

ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿಗೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಇನ್ನು ಮುಂದೆ ಎಸ್‌ಎಂಎಸ್ ಮೂಲಕವೇ ದಂಡ ಪಾವತಿ ನೋಟಿಸ್ ಬರಲಿದೆ!..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿಗೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಇನ್ನು ಮುಂದೆ ಎಸ್‌ಎಂಎಸ್ ಮೂಲಕವೇ ದಂಡ ಪಾವತಿ ನೋಟಿಸ್ ಬರಲಿದೆ!..

ಈ ಮೂಲಕ ಈ ಹಿಂದೆ ಅಂಚೆ ಮೂಲಕ ನೋಟಿಸ್ ನೀಡುವ ದುಬಾರಿ ವೆಚ್ಚದ ನಿಯಮಕ್ಕೆ ಸಂಚಾರಿ ಪೊಲೀಸರು ಬ್ರೇಕ್ ಹಾಕಿದ್ದು, ತಂತ್ರಜ್ಞಾನ ಆಧಾರಿತ, ಎಸ್ಎಂಎಸ್ ನೋಟಿಸ್ ರವಾನೆಗೆ ಪ್ರಾಯೋಗಿಕ ಚಾಲನೆ ನೀಡಿದ್ದಾರೆ.

ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ. ಆರ್. ರವಿಕಾಂತೇಗೌಡ ಅವರು, ಬೆಂಗಳೂರು ಸಂಚಾರ ವಿಭಾಗದಲ್ಲಿ ಸಂಚಾರ ನಿಯಮ ಉಲ್ಲಂಘನೆ, ದಂಡದ ಮೊತ್ತವನ್ನು ಫೀಲ್ಡ್ ಟ್ರಾಫಿಕ್ ಉಲ್ಲಂಘನೆ ಪುಸ್ತಕದಲ್ಲಿ ನಮೂದಿಸುತ್ತಿದ್ದರು. ಈ ವಿವರ ಆಧರಿಸಿ ಎಫ್‌ಟಿಆರ್ ಪುಸ್ತಕದಲ್ಲಿ ಉಲ್ಲೇಖಿಸಿದ್ದನ್ನು ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿತ್ತು. ಇನ್ನು ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರಿಗೆ ಅಂಚೆ ಮೂಲಕ ನೋಟಿಸ್ ರವಾನಿಸಲಾಗುತ್ತಿತ್ತು. ಪ್ರತಿ ನೋಟಿಸ್‌ಗೆ ಸರಾಸರಿ 4.50 ರೂ. ವೆಚ್ಚ ವಾಗುತ್ತಿತ್ತು. ಹೀಗಾಗಿ ಪ್ರತಿ ದಿನ 20 ಸಾವಿರ ನೋಟಿಸ್ ನೀಡಲು ಒಂದು ಲಕ್ಷ ರೂ. ವೆಚ್ಚವಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಂಚಾರ ಇಲಾಖೆ ತಂತ್ರಜ್ಞಾನ ಮೊರೆ ಹೋಗಿದೆ ಎಂದು ಹೇಳಿದ್ದಾರೆ.

ಇದರ ಬದಲಾಗಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮೊಬೈಲ್ ನಂಬರ್‌ಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಎಸ್ಎಂಎಸ್ ಮೂಲಕವೇ ದಂಡದ ಮೊತ್ತ, ಸಂಚಾರ ನಿಯಮ ಉಲ್ಲಂಘನೆ ವಿವರಗಳು ಸಂದೇಶದಲ್ಲಿ ಅಡಕವಾಗಲಿದೆ. ಹೊಸ ಎಸ್ಎಂಎಸ್ ವ್ಯವಸ್ಥೆಯು ಎಲ್ಲಾ ಟ್ರಾಫಿಕ್ ಉಲ್ಲಂಘಿಸುವವರಿಗೆ ಅನ್ವಯಿಸುವುದಿಲ್ಲ. "ಈ ಹೊಸ ವ್ಯವಸ್ಥೆಯು 2019 ರಿಂದ ನೋಂದಣಿಯಾದ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಉಳಿದೆಲ್ಲಾ ವಾಹನಗಳಿಗೂ ಅಂಚೆ ಮೂಲಕ ನೋಟಿಸ್ ನೀಡಲಾಗುತ್ತದೆ.

ಇದರಿಂದ ಸಿಬ್ಬಂದಿ ಶ್ರಮದ ಜತೆಗೆ ಅನಾವಶ್ಯಕ ದುಂದು ವೆಚ್ಚ ಹಾಗೂ ಕಾಗದ ರಹಿತ ಆಡಳಿತ ನೀಡಲು ನೆರವಾಗಲಿದೆ. ಕೇವಲ 20 ಪೈಸೆ ವೆಚ್ಚದಲ್ಲಿ ಒಂದು ನೋಟಿಸ್ ರವಾನೆಯಾಗಲಿದ್ದು, ಒಂದು ನೋಟಿಸ್‌ನಿಂದ 4.30 ಪೈಸೆ ಇಲಾಖೆಗೆ ಉಳಿತಾಯವಾಗಲಿದೆ. ಇದರಿಂದ ಆರ್ಥಿಕ ಹೊರೆ ಕೂಡ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com