ಡೆಲ್ಟಾ ರೂಪಾಂತರಿಯನ್ನೇ ಧೈರ್ಯವಾಗಿ ಎದುರಿಸಿದ್ದೇವೆ, ಓಮಿಕ್ರಾನ್ ತೀವ್ರತೆ ಗಂಭೀರವಾಗಿರುವುದಿಲ್ಲ, ಆತಂಕ ಬೇಡ: ಆರೋಗ್ಯ ಸಚಿವ ಡಾ ಸುಧಾಕರ್

ಕೆಲ ದಿನಗಳ ಹಿಂದೆ ಬೆಂಗಳೂರಿನ ಓಮಿಕ್ರಾನ್ ಕೊರೋನಾ ಸೋಂಕಿತ ವೈದ್ಯರ ಮತ್ತು ಮತ್ತೊಬ್ಬರ ಸಂಪರ್ಕಿತರ ಜಿನೋಮಿಕ್ ಸೀಕ್ವೆನ್ಸ್ ವರದಿಯನ್ನು ಕೇಂದ್ರ ಸಂಸ್ಥೆಯ ಪ್ರಯೋಗಾಲಯಕ್ಕೆ ವರದಿಗೆ ಕಳುಹಿಸಲಾಗಿದ್ದು ಅದರ ವರದಿ ಇನ್ನೂ ಬಂದಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಓಮಿಕ್ರಾನ್ ಕೊರೋನಾ ಸೋಂಕಿತ ವೈದ್ಯರ ಮತ್ತು ಮತ್ತೊಬ್ಬರ ಸಂಪರ್ಕಿತರ ಜಿನೋಮಿಕ್ ಸೀಕ್ವೆನ್ಸ್ ವರದಿಯನ್ನು ಕೇಂದ್ರ ಸಂಸ್ಥೆಯ ಪ್ರಯೋಗಾಲಯಕ್ಕೆ ವರದಿಗೆ ಕಳುಹಿಸಲಾಗಿದ್ದು ಅದರ ವರದಿ ಇನ್ನೂ ಬಂದಿಲ್ಲ, ಬೇರೆ ರಾಜ್ಯಗಳ ವರದಿ ಬಂದಿದ್ದು, ನಮ್ಮ ರಾಜ್ಯದ ಎರಡು ವರದಿಗಳು ಬರಲು ಬಾಕಿಯಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಓಮಿಕ್ರಾನ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಇದುವರೆಗೆ ಓಮಿಕ್ರಾನ್ ಸೋಂಕಿನ ಗುಣಲಕ್ಷಣಗಳು ಕಂಡುಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓಮಿಕ್ರಾನ್ ಸೋಂಕಿತರಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ, ಇನ್ನು ಅವರ ಪ್ರಾಥಮಿಕ ಸಂಪರ್ಕಿತರು ಕೊರೋನಾದ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ ಎಂದರು.

ಲಸಿಕೆಯ ಎರಡೂ ಡೋಸ್ ಪಡೆಯಿರಿ: ಕೊರೋನಾ ವ್ಯಾಕ್ಸಿನ್ ನ ಒಂದು ಡೋಸ್ ಪಡೆಯುವುದರಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ಬರುವುದಿಲ್ಲ. ಎರಡೂ ಡೋಸ್ ಗಳನ್ನು ಪಡೆದುಕೊಂಡರೆ ಮಾತ್ರ ಸುರಕ್ಷಿತವಾಗಿರಬಹುದು, ಹೀಗಾಗಿ ರಾಜ್ಯದ ಜನತೆಯಲ್ಲಿ ನಾನು ಕೊರೋನಾ ಲಸಿಕೆಯ ಎರಡೂ ಡೋಸ್ ಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದರು.

ಓಮಿಕ್ರಾನ್ ಗೆ ಆತಂಕ ಪಡುವ ಅಗತ್ಯವಿಲ್ಲ: ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಸೋಂಕಿನ ಪ್ರಭಾವ ತೀವ್ರವಾಗಿದ್ದ ಡೆಲ್ಟಾ ರೂಪಾಂತರಿಯನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಓಮಿಕ್ರಾನ್ ರೂಪಾಂತರಿ ಅಷ್ಟೊಂದು ತೀವ್ರವಾಗಿಲ್ಲ, ಸೌಮ್ಯರೂಪದ್ದಾಗಿದೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ, ಕೊರೋನಾ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋಗಿ ಎಂದರು.

ಓಮಿಕ್ರಾನ್ ಹರಡುವಿಕೆ ವೇಗವಾಗಿದೆಯಷ್ಟೇ ಹೊರತು ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ದೇಶಗಳಲ್ಲಿ ನೋಡಿದಾಗ ತೀವ್ರತೆ ಸೌಮ್ಯರೂಪವಾಗಿದೆ. ಕೋವಿಡ್ ಲಸಿಕೆಯನ್ನು ಬೇಗನೆ ಜನರು ತೆಗೆದುಕೊಳ್ಳಬೇಕು. ಇನ್ನೂ ಕೂಡ ರಾಜ್ಯದಲ್ಲಿ 70 ಲಕ್ಷ ಲಸಿಕೆ ದಾಸ್ತಾನು ಇದೆ, ಲಸಿಕೆಗೇನು ಕೊರತೆಯಿಲ್ಲ ಎಂದರು.

ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧ್ಯಯನ ಮಾಡಿ ತೀರ್ಮಾನ ತೆಗೆದುಕೊಳ್ಳಲಿದೆ. ಸಮಗ್ರ ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆಯೇ ಎಂದು ಸ್ಪಷ್ಟ ಚಿತ್ರಣ ಹೊರಬಂದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಯಾವುದೇ ಸಾಂಕ್ರಾಮಿಕ ರೋಗ ಹಿಂದೆ ಬಂದಿದ್ದು ನೋಡಿದಾಗ ಮೊದಲೇ ಅಲೆಗಿಂತ ಎರಡನೇ ಅಲೆ ತೀವ್ರವಾಗಿರುತ್ತದೆ. ನಂತರ ಮೂರನೇ, ನಾಲ್ಕನೇ ಅಲೆ ಬಂದರೂ ತೀವ್ರತೆ ಸೌಮ್ಯರೂಪವಾಗಿ ನಂತರ ಬೇರೆಡೆಗೆ ಹೋಗುತ್ತದೆ. ಹಿಂದೆ ಹೀಗೆಯೇ ಆಗಿರುವುದು. ಹೀಗಾಗಿ ಆತಂಕ ಬೇಡ ಎಂದು ಪುನರುಚ್ಛರಿಸಿದರು.

ಮಕ್ಕಳಿಗೆ ಡೆಲ್ಟಾ ರೂಪಾಂತರ ಗಂಭೀರವಾಗಿ ಪರಿಣಾಮ ಉಂಟುಮಾಡಿಲ್ಲ, ಈ ಓಮಿಕ್ರಾನ್ ರೂಪಾಂತರ ಕೂಡ ತೀವ್ರವಾಗಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com