ಆರೋಗ್ಯ ಮೂಲಸೌಕರ್ಯ ವೃದ್ಧಿ; ತಂಬಾಕು ಉತ್ಪನ್ನಗಳ ಅಬಕಾರಿ ಸುಂಕ ಹೆಚ್ಚಿಸಿ: ಸರ್ಕಾರಕ್ಕೆ ಆರ್ಥಿಕ ತಜ್ಞರ ಮನವಿ

ಹೆಚ್ಚುವರಿ ಆದಾಯ ಗಳಿಸಲು ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೆಚ್ಚುವರಿ ಆದಾಯ ಗಳಿಸಲು ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ಅವರು, ಸಿಗರೇಟ್‌, ಬೀಡಿ ಮತ್ತು ಹೊಗೆರಹಿತ ತಂಬಾಕುಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸಲು ಒತ್ತಾಯಿಸಿದ್ದಾರೆ. ಈ ಸಮೂಹದ ಪ್ರಕಾರ, ಎಲ್ಲಾ ತಂಬಾಕು ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸುವುದು ಆದಾಯ ಹೆಚ್ಚಿಸುವ ಕೇಂದ್ರ ಸರ್ಕಾರದ ತುರ್ತು ಅಗತ್ಯವನ್ನು ಪೂರೈಸುವ ಪರಿಣಾಮಕಾರಿ ಕ್ರಮವಾಗಲಿದೆ. ಇದು ತಂಬಾಕು ಉತ್ಪನ್ನದ ಬಳಕೆ, ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಕೋವಿಡ್‌ ಸಂಬಂಧಿ ನ್ಯೂನತೆಗಳನ್ನು ಕಡಿಮೆಗೊಳಿಸುವ ಜೊತೆಗೆ, ಆದಾಯ ಸೃಷ್ಟಿಗೂ ಕಾರಣವಾಗುವುದರಿಂದ ಇದು ಎಲ್ಲಾ ವಿಧದಲ್ಲಿಯೂ ಲಾಭಕಾರಿ ಯೋಜನೆಯಾಗಲಿದೆ.

ತಂಬಾಕಿನ ತೆರಿಗೆ ಆದಾಯವು ಸಾಂಕ್ರಾಮಿಕ ಸಮಯದಲ್ಲಿ ಲಸಿಕೆ ಮತ್ತು ಆರೋಗ್ಯ ಮೂಲಸೌಕರ್ಯಗಳ ಹೆಚ್ಚಳ ಸೇರಿದಂತೆ ಸಂಪನ್ಮೂಲಗಳ  ಕ್ರೋಡೀಕರಣಕ್ಕೆ ಬಳಕೆಯಾಗಬಹುದು. ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ವಿಧಿಸುವುದು ಮತ್ತು ಅವುಗಳನ್ನು ಜಿಎಸ್‌ಟಿಯಲ್ಲಿ ಅತ್ಯಧಿಕ ತೆರಿಗೆ ಸ್ಲ್ಯಾಬ್‌ಗೆ ಸೇರಿಸುವುದರಿಂದ, ಅದು ತಂಬಾಕು ಉತ್ಪನ್ನಗಳು ಅಗ್ಗದ ಬೆಲೆಗೆ ದೊರೆಯದಂತೆ ಖಾತರಿಪಡಿಸುತ್ತದೆ. ಇದು ದುರ್ಬಲ ಜನರ ನಡುವೆ ತಂಬಾಕು ಬಳಕೆ ಕಡಿಮೆ ಮಾಡಲು ಸದೃಢ ಅಡಿಪಾಯ ಒದಗಿಸುತ್ತದೆ ಮತ್ತು ದೇಶದ 268 ಮಿಲಿಯನ್ ತಂಬಾಕು ಬಳಕೆದಾರರ ಜೀವನದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಅಲ್ಲದೆ, ಮಕ್ಕಳು ಮತ್ತು ಯುವಕರು ತಂಬಾಕು ಸೇವನೆ ಪ್ರಾರಂಭಿಸುವುದನ್ನು ತಡೆಯುತ್ತದೆ.

2001ರಿಂದ ಕರ್ನಾಟಕದಲ್ಲಿ ತಂಬಾಕು ನಿಯಂತ್ರಣದ ಕುರಿತು ಕೆಲಸ ಮಾಡುತ್ತಿರುವ ವ್ಯಕ್ತಿಗಳು, ಸಾರ್ವಜನಿಕ ಆರೋಗ್ಯ ಪ್ರತಿಪಾದಕರು, ಆರ್ಥಿಕ ತಜ್ಞರು, ಆರೋಗ್ಯ ಕಾಳಜಿ ಸಂಘಟನೆಗಳ ಸಮ್ಮಿಲನವಾಗಿರುವ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಸಂಚಾಲಕ ಎಸ್‌. ಜೆ. ಚಂದರ್‌, “ಮಕ್ಕಳನ್ನು ತಂಬಾಕುಗಳಿಂದ ದೂರವಿಡಲು, ಅದರ ತೆರಿಗೆ ಹೆಚ್ಚಿಸಿ ದುಬಾರಿಯಾಗಿಸುವುದು ಅತ್ಯಂತ ಉತ್ತಮ ಮತ್ತು ಸುಲಭ ಮಾರ್ಗ. ತಂಬಾಕನ್ನು ಸೇವಿಸುವುದು ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ತಪ್ಪಲ್ಲ ಎಂದು ಸಾರುವ ಮೂಲಕ ತಂಬಾಕು ಕಂಪನಿಗಳನ್ನು ಮಕ್ಕಳನ್ನು ಗುರಿಯಾಗಿಸಿ ಮಾರುಕಟ್ಟೆ ಮಾಡುತ್ತಿವೆ. ಅಲ್ಲದೆ, ತಂಬಾಕು ಅತ್ಯಂತ ವ್ಯಸನಕಾರಿಯಾದ್ದರಿಂದ, ತುರ್ತಾಗಿ ಈ ಕ್ರಮ ಕೈಗೊಳ್ಳಬೇಕಿದೆ” ಎಂದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಹಣಕಾಸು ಸಚಿವಾಲಯ ನೀಡಿರುವ ಪ್ರತಿಕ್ರಿಯೆಯಲ್ಲಿ, ತಂಬಾಕು ಉತ್ಪನ್ನಗಳ ಮೇಲೆ 2018-19ನೇ ಸಾಲಿನಲ್ಲಿ 1,234 ಕೋಟಿ ರೂ. 2019-20ರಲ್ಲಿ 1,610 ಕೋಟಿ ರೂ. ಮತ್ತು 2020-21ರಲ್ಲಿ 4,962 ಕೋಟಿ ರೂ. ಕೇಂದ್ರೀಯ ಅಬಕಾರಿ ಮತ್ತು ಸೆಸ್ (ಎನ್‌ಸಿಸಿಡಿ) ಸಂಗ್ರಹಿಸಲಾಗಿದೆ ಎಂದು ತಿಳಿಸಿದೆ. ತಂಬಾಕಿನಿಂದ ಸಂಗ್ರಹಿಸಲಾದ ತೆರಿಗೆಗಳು, ಇತರ ಮೂಲಗಳಿಂದ ಸಂಗ್ರಹಿಸಲಾದ ತೆರಿಗೆಗಳಂತೆಯೇ ದೇಶದ ಒಟ್ಟು ತೆರಿಗೆ ಆದಾಯದ (ಜಿಟಿಆರ್) ಭಾಗವಾಗಿದೆ ಮತ್ತು ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಈ ಹಣ ಬಳಸಲಾಗುತ್ತದೆ.

ಒಟ್ಟು ತಂಬಾಕು ತೆರಿಗೆಗಳಲ್ಲಿ ಕೇಂದ್ರೀಯ ಅಬಕಾರಿ ಸುಂಕದ ಪಾಲು 2017 ರಿಂದ (ಜಿಎಸ್‌ಟಿ ಪೂರ್ವ) 2021 ವರೆಗೆ (ಜಿಎಸ್‌ಟಿ ನಂತರ) ಸರಾಸರಿಯಾಗಿ, ಸಿಗರೇಟ್‌ಗಳಿಗೆ 54% ರಿಂದ 8% ಕ್ಕೆ, ಬೀಡಿಗಳಿಗೆ 17% ರಿಂದ 1% ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳಿಗೆ 59% ರಿಂದ 11% ಕ್ಕೆ ಇಳಿಕೆಯಾಗಿದೆ. 2017ರ ಜುಲೈನಲ್ಲಿ ಜಿಎಸ್‌ಟಿಯನ್ನು ಪರಿಚಯಿಸಿದ ನಂತರ ತಂಬಾಕು ತೆರಿಗೆಗಳಲ್ಲಿ ಯಾವುದೇ ಪ್ರಮುಖ ಏರಿಕೆ ಕಂಡುಬಂದಿಲ್ಲ ಮತ್ತು ಕಳೆದ ಮೂರು ವರ್ಷಗಳಲ್ಲಿ ಎಲ್ಲಾ ತಂಬಾಕು ಉತ್ಪನ್ನಗಳು ಹೆಚ್ಚು ಕೈಗೆಟುಕುವಂತಾಗಿದೆ. ಪ್ರಪಂಚದ ಹಲವಾರು ದೇಶಗಳು ಜಿಎಸ್‌ಟಿ ಅಥವಾ ಮಾರಾಟ ತೆರಿಗೆಯೊಂದಿಗೆ ಹೆಚ್ಚಿನ ಅಬಕಾರಿ ತೆರಿಗೆ ವಿಧಿಸಿವೆ ಮತ್ತು ಅವುಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಿವೆ. ಆದರೂ, ಭಾರತದಲ್ಲಿ ತಂಬಾಕಿನ ಮೇಲಿನ ಅಬಕಾರಿ ಸುಂಕವು ಅತ್ಯಂತ ಕಡಿಮೆ ಮಟ್ಟದಲ್ಲಿಯೇ ಇದೆ.

ಆರೋಗ್ಯ ಆರ್ಥಿಕ ತಜ್ಞ ಮತ್ತು ಕೊಚ್ಚಿಯ ರಾಜಗಿರಿ ಸಮಾಜ ವಿಜ್ಞಾನ ಕಾಲೇಜಿನ ಸಹಾಯಕ ಪ್ರೊಫೆಸರ್‌ ಡಾ.ರಿಜೋ ಜಾನ್‌, “ದೇಶದಲ್ಲಿ ಜಿಎಸ್‌ಟಿ ಜಾರಿಯಾದ ನಂತರ ತಂಬಾಕು ತೆರಿಗೆಯಲ್ಲಿ ಯಾವುದೇ ಪ್ರಮುಖ ಏರಿಕೆಯಾಗದ ಕಾರಣ, ತಂಬಾಕು ಉದ್ಯಮ ವಿಸ್ತರಿತ ತೆರಿಗೆ-ಮುಕ್ತ ಋತುವಿನ ಆನಂದ ಪಡೆಯುತ್ತಿದೆ. ಇದು ಹಲವು ತಂಬಾಕು ಉತ್ಪನ್ನಗಳ ಜನರ ಕೈಗೆಟಕುವಂತೆ ಮಾಡಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಬಲ್ಲದು ಮತ್ತು 2010-2017ರಲ್ಲಿ ಭಾರತ ಸಾಧಿಸಿರುವ ತಂಬಾಕು ಹರಡುವಿಕೆ ಇಳಿಕೆಯನ್ನು ತಲೆಕೆಳಗಾಗಿಸಬಹುದು. ಕೇಂದ್ರ ಬಜೆಟ್‌ನಲ್ಲಿ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ, ತಂಬಾಕು ತೆರಿಗೆಯನ್ನು, ವಿಶೇಷವಾಗಿ ಬೀಡಿಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಏರಿಸಬೇಕು”, ಎಂದು ಮನವಿ ಮಾಡಿದ್ದಾರೆ.

ತಂಬಾಕು ಉತ್ಪನ್ನಗಳ ಒಟ್ಟು ತೆರಿಗೆ ಹೊರೆ (ಅಂತಿಮ ತೆರಿಗೆ ಸೇರಿದಂತೆ ಚಿಲ್ಲರೆ ಬೆಲೆಯ ಶೇಕಡಾವಾರು ತೆರಿಗೆಗಳು) ಸಿಗರೇಟ್‌ಗಳಿಗೆ ಕೇವಲ 52.7%, ಬೀಡಿಗಳಿಗೆ 22% ಮತ್ತು ಹೊಗೆರಹಿತ ತಂಬಾಕಿಗೆ 63.8%ರಷ್ಟಿದೆ.  ಇದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)  ಶಿಫಾರಸು ಮಾಡಿರುವ ಎಲ್ಲಾ ತಂಬಾಕು ಉತ್ಪನ್ನಗಳಿಗೆ ಕನಿಷ್ಠ 75% ಚಿಲ್ಲರೆ ಬೆಲೆಯ ತೆರಿಗೆ ಹೊರೆಗಿಂತ ಅತೀ ಕಡಿಮೆಯಿದೆ. ಡಬ್ಲ್ಯುಎಚ್‌ಒ ಪ್ರಕಾರ, ತಂಬಾಕು ಬಳಕೆಯನ್ನು ಕಡಿಮೆ ಮಾಡಲು ತೆರಿಗೆ ಹೆಚ್ಚಳದ ಮೂಲಕ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸುವುದು ಅತ್ಯಂತ ಪರಿಣಾಮಕಾರಿ ನೀತಿಯಾಗಿದೆ. ಇದು ತಂಬಾಕು ಬಳಕೆದಾರರಿಗೆ ತಂಬಾಕು ತೊರೆಯಲು ಉತ್ತೇಜಿಸುತ್ತದೆ, ಹೊಸ ಬಳಕೆದಾರರನ್ನು ನಿಯಂತ್ರಿಸುತ್ತದೆ ಮತ್ತು ನಿರಂತರ ಬಳಕೆದಾರರಲ್ಲಿ ಸೇವನೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ತಂಬಾಕು ಸೇವನೆ ಗಂಭೀರ ಸ್ವರೂಪದ ಕೋವಿಡ್-19 ಸೋಂಕು, ಇತರ ಸಮಸ್ಯೆಗಳು ಮತ್ತು ಸಾವಿನ ಅಪಾಯ ಹೆಚ್ಚಿಸುತ್ತದೆ. ಧೂಮಪಾನಿಗಳು ತೀವ್ರವಾದ ಕಾಯಿಲೆಗೆ ತುತ್ತಾಗುವ ಮತ್ತು ಕೋವಿಡ್-19 ನಿಂದ ಸಾಯುವ ಅಪಾಯವನ್ನು ಹೊಂದಿರುತ್ತಾರೆ ಎಂದು ಲಭ್ಯವಿರುವ ಸಂಶೋಧನೆಗಳು ಸೂಚಿಸುತ್ತವೆ. ತಂಬಾಕು ಸೇವನೆಯು ನಿಧಾನವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಪ್ರತಿ ವರ್ಷ 13 ಲಕ್ಷ ಭಾರತೀಯರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ತಂಬಾಕು ಉತ್ಪನ್ನಗಳನ್ನು ಯುವಕರು ಮತ್ತು ಸಮಾಜದ ಹಿಂದುಳಿದ ವರ್ಗಗಳಂತಹ ದುರ್ಬಲ ಜನಸಂಖ್ಯೆಯಿಂದ ದೂರವಿಡುವುದು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ.

ಖ್ಯಾತ ಆರ್ಥಿಕ ತಜ್ಞ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ಆರ್‌. ಎಸ್‌. ದೇಶಪಾಂಡೆ, “ತಂಬಾಕು ಅನಾರೋಗ್ಯಕರ ಪದಾರ್ಥವೆಂದು ವೈಜ್ಞಾನಿಕವಾಗಿ ಸಾಬೀತಾಗಿದ್ದು, ತಂಬಾಕು ಬಳಕೆದಾರರು, ವಿಶೇಷವಾಗಿ ಭಾರತದ ಯುವಜನರನ್ನು ತಂಬಾಕು ತ್ಯಜಿಸುವಂತೆ ಮಾಡಲು ಕೇವಲ ಮನವೊಲಿಕೆಯಿಂದ ಸಾಧ್ಯವಿಲ್ಲ. ಏಕಕಾಲಕ್ಕೆ ತಂಬಾಕು ಬಳಕೆಯನ್ನು ತಡೆಯಲು ಮತ್ತು ಆದಾಯ ಸಂಗ್ರಹವನ್ನು ಹೆಚ್ಚಿಸಲು ತಂಬಾಕು ತೆರಿಗೆಯನ್ನು ಎರಡು ಅಲಗಿನ ಕತ್ತಿಯಂತೆ ಬಳಸಬಹುದ

ಖ್ಯಾತ ಆರ್ಥಿಕ ತಜ್ಞ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ಆರ್‌. ಎಸ್‌. ದೇಶಪಾಂಡೆ, “ತಂಬಾಕು ಅನಾರೋಗ್ಯಕರ ಪದಾರ್ಥವೆಂದು ವೈಜ್ಞಾನಿಕವಾಗಿ ಸಾಬೀತಾಗಿದ್ದು, ತಂಬಾಕು ಬಳಕೆದಾರರು, ವಿಶೇಷವಾಗಿ ಭಾರತದ ಯುವಜನರನ್ನು ತಂಬಾಕು ತ್ಯಜಿಸುವಂತೆ ಮಾಡಲು ಕೇವಲ ಮನವೊಲಿಕೆಯಿಂದ ಸಾಧ್ಯವಿಲ್ಲ. ಏಕಕಾಲಕ್ಕೆ ತಂಬಾಕು ಬಳಕೆಯನ್ನು ತಡೆಯಲು ಮತ್ತು ಆದಾಯ ಸಂಗ್ರಹವನ್ನು ಹೆಚ್ಚಿಸಲು ತಂಬಾಕು ತೆರಿಗೆಯನ್ನು ಎರಡು ಅಲಗಿನ ಕತ್ತಿಯಂತೆ ಬಳಸಬಹುದಾಗಿದೆ. ಇದರಿಂದ ಹರಿದುಬರುವ ಹೆಚ್ಚುವರಿ ಆದಾಯವನ್ನು ತಂಬಾಕು ಬಳಕೆ ಮತ್ತು ಉತ್ಪಾದನೆಯಲ್ಲಿ ಉಂಟಾಗಬಹುದಾದ ಇಳಿಕೆಯಿಂದ ತೊಂದರೆಗೀಡಾಗುವ ಕಾರ್ಮಿಕರ ಪುನರ್ವಸತಿಗೆ ಬಳಸಬಹುದು,” ಎಂದರು.

ವಿಶ್ವದಲ್ಲಿ ಭಾರತವು ಎರಡನೇ ಅತಿ ದೊಡ್ಡ ಸಂಖ್ಯೆಯ (268 ಮಿಲಿಯನ್) ತಂಬಾಕು ಬಳಕೆದಾರರನ್ನು ಹೊಂದಿದೆ ಮತ್ತು ಈ ಪೈಕಿ 13 ಲಕ್ಷ ಜನರು ತಂಬಾಕು ಸಂಬಂಧಿತ ರೋಗಗಳಿಂದ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿನ ಎಲ್ಲ ವಿಧಗಳ ಕ್ಯಾನ್ಸರ್‌ಗಳ ಪೈಕಿ ಸುಮಾರು 27% ಕ್ಯಾನ್ಸರ್‌ಗಳಿಗೆ ತಂಬಾಕು ಕಾರಣವಾಗಿರುತ್ತದೆ.  2017-18 ರಲ್ಲಿ  ತಂಬಾಕು ಸೇವನೆಯಿಂದ ಉಂಟಾಗಿರುವ ಎಲ್ಲಾ ರೋಗಗಳು ಮತ್ತು ಸಾವುಗಳಿಂದ ವಾರ್ಷಿಕ ಆರ್ಥಿಕ ವೆಚ್ಚ 177,341 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇದು ಭಾರತದ ಜಿಡಿಪಿಯ 1% ಆಗಿದೆ. ಇದು ಕೋವಿಡ್‌ ನಂತರದ ಇನ್ನಷ್ಟು ಹೆಚ್ಚಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com