ಯುವಶಕ್ತಿಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ನಮ್ಮ ದೇಶ ಯುವ ರಾಷ್ಟ್ರ. ಇಂದಿನ ಯುವ ಸಮಾಜದ ಆದ್ಯತೆ ಬೇರೆಯವರಿಗಿಂತ ಭಿನ್ನವಾಗಿ ಯೋಚಿಸುವುದು, ಎಲ್ಲರಿಗಿಂತಲೂ ಕ್ಷಿಪ್ರ ವೇಗದಲ್ಲಿ ಸಾಧನೆ ಮಾಡುವುದು ಆಗಿರುತ್ತದೆ.
Published: 10th December 2021 07:49 PM | Last Updated: 10th December 2021 08:04 PM | A+A A-

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು: ಯುವಶಕ್ತಿಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
'ನಮ್ಮ ದೇಶ ಯುವ ರಾಷ್ಟ್ರ. ಇಂದಿನ ಯುವ ಸಮಾಜದ ಆದ್ಯತೆ ಬೇರೆಯವರಿಗಿಂತ ಭಿನ್ನವಾಗಿ ಯೋಚಿಸುವುದು, ಎಲ್ಲರಿಗಿಂತಲೂ ಕ್ಷಿಪ್ರ ವೇಗದಲ್ಲಿ ಸಾಧನೆ ಮಾಡುವುದು ಆಗಿರುತ್ತದೆ. . ಇಲ್ಲಿನ ಯುವ ಉದ್ಯಮಿಗಳು ದೇಶವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಬಹುದಾಗಿದ್ದು, ಯುವಶಕ್ತಿಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅವರು ಹೇಳಿದರು.
ಇಂದು ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ಯಂಗ್ ಪ್ರೆಸಿಡೆಂಟ್ ಆರ್ಗನೈಸೇಶನ್ (ವೈಪಿಓ) ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶ ಸದೃಢ ರಾಷ್ಟ್ರವನ್ನಾಗಿಸಲು ಯುವಜನತೆಯಿಂದ ಮಾತ್ರ ಸಾಧ್ಯ. ಇಂದಿನ ಯುವಜನತೆಯೇ ನಮ್ಮ ದೇಶದ ಭವಿಷ್ಯ. ಹಾಗಾಗಿ, ಯುವಜನತೆಯಲ್ಲಿ ನಾವೆಲ್ಲರೂ ಶಕ್ತಿ ತುಂಬಬೇಕು, ಯುವಶಕ್ತಿ ಜಾಗೃತವಾದರೆ ಮಾತ್ರ ನಮ್ಮ ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ಉತ್ತಮ ಶಿಕ್ಷಣ ಪಡೆದು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಯವಜನತೆ ಮೇಲಿದೆ. ಸಂವಹನಾ, ವೃತ್ತಿ ಕೌಶಲ್ಯ, ಆತ್ಮವಿಶ್ವಾಸ, ತಾಳ್ಮೆ ರೂಢಿಸಿಕೊಳ್ಳುವುದರ ಜೊತೆಗೆ ಭಾರತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರ ವೇಗದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ಉದ್ಯೋಗ ಅರಸುವ ಬದಲು ಯುವಪೀಳಿಗೆ ಉದ್ಯೋಗದಾತರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಾರತವನ್ನು ವಿಶ್ವ ಗುರು ಮತ್ತು ಚಿನ್ನದ ಹಕ್ಕಿ ಎಂದು ಕರೆಯಲಾಗುತಿತ್ತು. ಏಕೆಂದರೆ ಪ್ರಾಚೀನ ಭಾರತದ ಶಿಕ್ಷಣ ವ್ಯವಸ್ಥೆ, ಜ್ಞಾನ ಮತ್ತು ವಿಜ್ಞಾನ, ಆರ್ಥಿಕತೆ, ಉದ್ಯಮ ವ್ಯವಸ್ಥೆಯು ಬಹಳ ಸಮೃದ್ಧವಾಗಿತ್ತು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕಾರಾಚಾರ್ಯ, ಧನ್ವಂತರಿ, ಭಾರದ್ವಾಜ, ಆತ್ರೇಯ, ಸುಶ್ರುತ ಮೊದಲಾದ ಮಹಾನ್ ವಿದ್ವಾಂಸರು ಈ ಪುಣ್ಯಭೂಮಿಯಲ್ಲಿ ಜನಿಸಿದವರು, ಅವರ ಕಾರ್ಯಗಳಿಂದಾಗಿ ದೇಶವು ಪ್ರಸಿದ್ಧವಾಗಿದೆ. ಸ್ವಾತಂತ್ರ್ಯದ ಈ 75 ವರ್ಷದಲ್ಲಿ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಅಭಿವೃದ್ಧಿ ಕಂಡಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟ್ರಾರ್ಟ್ ಅಪ್ ಸೇರಿದಂತೆ ಇತರೆ ಯೋಜನೆಗಳ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸಲು ಪ್ರಯತ್ನಿಸಿದೆ ಮತ್ತು ಈ ಮೂಲಕ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯವು ಜ್ಞಾನ ಮತ್ತು ವಿಜ್ಞಾನ ಸಂಶೋಧನೆ, ನಾವೀನ್ಯತೆಗಳ ಮತ್ತು ಸಾಫ್ಟ್‌ವೇರ್‌ನ ಅತಿದೊಡ್ಡ ಕೇಂದ್ರವಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಹೆಚ್ಚಿನ ಸಂಖ್ಯೆಯ ಐಟಿ ಕಂಪನಿಗಳನ್ನು ಹೊಂದಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕವೂ ತನ್ನದೇ ಆದ ಕೊಡುಗೆ ನೀಡಿದ್ದು, ಇಲ್ಲಿನ ಉದ್ಯಮಿಗಳ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವೈಪಿಒ ಅಧ್ಯಕ್ಷರಾದ ತುಲಸ್ಯಾನ್, ಶ್ರೀ ಅಮಿತ್ ಚಾವ್ಲಾ ಮತ್ತು ತ್ರಿಷ್ಟಾ ರಾಮಮೂರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.