ಸಿವಿಲ್ ಸೇವೆ: ಹುದ್ದೆಗಳ ಆಧಾರದ ಮೇಲೆ ವರ್ಗೀಕರಿಸಿ ನೇಮಕಾತಿಗೆ ಸರ್ಕಾರ ಮುಂದು!

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆ ಭರ್ತಿಗೆ ಮಂಜೂರಾದ ಸ್ಥಾನಗಳ ಆಧಾರದ ಮೇಲೆ ವರ್ಗೀಕರಣದ ಬದಲಿಗೆ ಹುದ್ದೆಗಳ ಆಧಾರದ ಮೇಲೆ ವರ್ಗೀಕರಣ ಮಾಡಿ ನೇಮಕಾತಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆ ಭರ್ತಿಗೆ ಮಂಜೂರಾದ ಸ್ಥಾನಗಳ ಆಧಾರದ ಮೇಲೆ ವರ್ಗೀಕರಣದ ಬದಲಿಗೆ ಹುದ್ದೆಗಳ ಆಧಾರದ ಮೇಲೆ ವರ್ಗೀಕರಣ ಮಾಡಿ ನೇಮಕಾತಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಈವರೆಗೂ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸದ್ಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಹಾಗೂ ಮುಂಬಡ್ತಿಗೆ (ಅನುಪಾತ/ ಶೇಕಡಾವಾರು) ಲಭ್ಯವಾಗುವಂತಹ ಹುದ್ದೆಗಳನ್ನು ಮಂಜೂರಾದ ಹುದ್ದೆಗಳಿಂದೇ ಪರಿಗಣಿಸಿ ಬಡ್ತಿ ನೀಡಲಾಗುತ್ತಿತ್ತು. ಬಡ್ತಿ ಹಾಗೂ ನೇಮಕಾತಿ ಮೂಲಕ ಬಡ್ತಿ ಪಡೆಯುವವರು ಪರಸ್ಪರ ಜ್ಯೇಷ್ಠತೆ ಹಾಗೂ ನೇಮಕಾತಿ ಸಮಯ ಬರುವವರೆಗೂ ಎರಡೂ ಹುದ್ದೆಗಳವರೂ ಕಾಯಬೇಕಾಗುತ್ತಿತ್ತು. ನೌಕರರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ತಿ ಅವಕಾಶ ಸಿಗುತ್ತಿರಲಿಲ್ಲ.

ಹೀಗಾಗಿ ಬದಲಾವಣೆಗೆ ನೌಕರರ ಸಂಘಟನೆಗಳು ಒತ್ತಾಯಿಸಿದ್ದವು, ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದವು. ನ್ಯಾಯಾಲಯದ ನಿರ್ದೇಶನದಂತೆ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರವಾಗಿ ಚರ್ಚೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ. ಹೇಮಲತಾ ಅವರು ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಮಾರ್ಗಸೂಚಿ ಅನ್ವಯ ರಾಜ್ಯ  ಸಿವಿಲ್‌ ಸೇವೆಗಳಲ್ಲಿನ ಹುದ್ದೆ ಭರ್ತಿ ಸಂದರ್ಭದಲ್ಲಿ ಮಂಜೂರಾದ ಸ್ಥಾನ ಆಧಾರಿತ ವರ್ಗೀಕರಣಕ್ಕೆ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣ ಪಾಲಿಸುವಂತೆ ಸೂಚಿಸಲಾಗಿದೆ.

ಒಂದೊಮ್ಮೆ ಹಳೆಯ ವಿಧಾನದಂತೆ ಮಂಜೂರಾದ ಸ್ಥಾನ ಆಧಾರಿತ ವರ್ಗೀಕರಣದಡಿ ಕೈಗೊಂಡು ಈವರೆಗೆ ಭರ್ತಿಯಾಗದಿದ್ದರೆ ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ರದ್ದುಪಡಿಸಬೇಕು. ಮುಂದೆ ಹುದ್ದೆ ಆಧಾರಿತ ಪದ್ಧತಿಯಂತೆ ವರ್ಗೀಕರಣ ಮಾಡಿ ಭರ್ತಿ ಮಾಡಬೇಕು ಎಂದು ತಿಳಿಸಲಾಗಿದೆ.

ಅಲ್ಲದೆ, ಈ ಆದೇಶ ಜಾರಿಗೆ ಬರುವ ಮೊದಲು ನಿರ್ಧರಿಸಲಾದ ಜೇಷ್ಠತೆ ಹಾಗೂ ಅಂತಿಮಗೊಳಿಸಲಾದ ಜೇಷ್ಠತಾ ಪಟ್ಟಿಗಳ ಮೇಲೆ ಈ ಹೊಸ ಮಾರ್ಗಸೂಚಿಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಮುಂದೆ ಕರ್ನಾಟಕ ಸರಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 10ರಡಿ ಜೇಷ್ಠತಾ ಪಟ್ಟಿಸಿದ್ಧಪಡಿಸುವಾಗ ಪರಿಷ್ಕೃತ ನಮೂನೆಗಳಲ್ಲಿ ಪ್ರತಿವರ್ಷ ಡಿ.31ಕ್ಕೆ ಅಂತ್ಯಗೊಂಡಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಸಿದ್ಧಪಡಿಸಬೇಕು. ಆಕ್ಷೇಪಣೆಗಳನ್ನು ಆಹ್ವಾನಿಸಿ, ನಿಯಮಾನುಸಾರ ಪರಿಶೀಲಿಸಿ ಮಾ. 31ರೊಳಗೆ ಅಂತಿಮ ಜೇಷ್ಠತಾ ಪಟ್ಟಿಪ್ರಕಟಿಸಬೇಕು ಎಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಸರ್ಕಾರದ ನಿರ್ಧಾರವು ನೇರ ನೇಮಕಾತಿ ಮತ್ತು ಬಡ್ತಿಗಾಗಿ ಖಾಲಿ ಇರುವ ಹುದ್ದೆಗಳ ವರ್ಗೀಕರಣದಲ್ಲಿನ ಅಸಮತೋಲನವನ್ನು ತೊಡೆದು ಹಾಕಲಿದೆ. ಪ್ರತಿ ವರ್ಷ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವುದರೊಂದಿಗೆ ಆಡಳಿತಾತ್ಮಕ ತೊಡಕುಗಳನ್ನು ತಡೆಯುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಅವರು ಹೇಳಿದ್ದು, ಆದೇಶವನ್ನು ಸ್ವಾಗತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com