ದಾವಣಗೆರೆಯಲ್ಲಿ ಹಿಂದಿ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಕುಚೇಷ್ಟೆ: ತಲೆಗೆ ಕಸದ ಬುಟ್ಟಿ ಹಾಕಿ ಪುಂಡತನ

ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿ ತಲೆಗೆ ಕಸದ ಬುಟ್ಟಿ ಹಾಕಿ ಕುಚೇಷ್ಠೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್‌ನಲ್ಲಿ ನಡೆದಿದೆ.
ಶಿಕ್ಷಕರ ಮೇಲೆ ವಿದ್ಯಾರ್ಥಿಗಳ ಪುಂಡಾಟ
ಶಿಕ್ಷಕರ ಮೇಲೆ ವಿದ್ಯಾರ್ಥಿಗಳ ಪುಂಡಾಟ

ದಾವಣಗೆರೆ: ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿ ತಲೆಗೆ ಕಸದ ಬುಟ್ಟಿ ಹಾಕಿ ಕುಚೇಷ್ಠೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್‌ನಲ್ಲಿ ನಡೆದಿದೆ.

ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್‌ ಅವರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿ ವಿಕೃತಿ ಪ್ರದರ್ಶಿಸಿದ್ದಾರೆ.

ಪ್ರಕಾಶ್‌ ಅವರು ಪಾಠ ಮಾಡಲೆಂದು ತರಗತಿಗೆ ಬಂದ ಸಮಯದಲ್ಲಿ ನಾಲ್ಕೈದು ವಿದ್ಯಾರ್ಥಿಗಳು ತಲೆಯ ಮೇಲೆ ಕಸದ ಬುಟ್ಟಿ ಹಾಕಿ ಪುಂಡತನ ತೋರಿಸಿದ್ದಾರೆ. ಇದನ್ನು ಅಲ್ಲಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಹಾವೇರಿ ಜಿಲ್ಲೆಯಿಂದ ವರ್ಗಾವಣೆಯಾಗಿದ್ದ ಶಿಕ್ಷಕ ಪ್ರಕಾಶ್ ತರಗತಿ ತೆಗೆದುಕೊಂಡಿದ್ದರು. ವಿದ್ಯಾರ್ಥಿಗಳು ಗುಟ್ಕಾ ಸೇವಿಸಿ ಕ್ಲಾಸ್ ನಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು, ಇದರಿಂದ ಶಿಕ್ಷಕ ಪ್ರಕಾಶ್ ಅವರು ವಿದ್ಯಾರ್ಥಿಗಳಿಗೆ ಬೈಯ್ದು ಶಿಸ್ತು ಕಾಪಾಡುವಂತೆ ಸಲಹೆ ನೀಡಿದೆ, ಅದರಿಂದ ಅವರು ನನ್ನ ಜೊತೆ  ಜಗಳವಾಡಿದರು. ನಂತರ ಬಕೆಟ್ ತೆಗೆದುಕೊಂಡು ನನ್ನ ಮೇಲೆ ಹಾಕಿದರು. ನನಗೆ ಅವರ ವರ್ತನೆಯಿಂದ  ಭಯ ವಾಗಿ ದೂರು ನೀಡಬೇಕೆಂದುಕೊಂಡಿದ್ದೆ, ಆದರೆ ಶಾಸಕರು ಮತ್ತು ಡಿಡಿಪಿಐ ಅವರ ಜೊತೆ ಮಾತನಾಡಿದ ನಂತರ ದೂರು ಸಲ್ಲಿಸದಿರಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಶಾಲೆಗೆ ಭೇಟಿ ನೀಡಿದ್ದರು. ಡಿಡಿಪಿಐ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡರು. ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಮಾಡಿರುವ ಕುಚೇಷ್ಠೆ ನನ್ನ ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತದೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಡಿಡಿಪಿಐಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com