ಬೆಳಗಾವಿ ವಿಧಾನಮಂಡಲ ಅಧಿವೇಶನ; ಬಂದವರ ಭೋಜನಕ್ಕೆ ತಯಾರಿ

ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಗಳಿಂದ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ದಂಡೇ ಕುಂದಾನಗರಿಗೆ ಹರಿದು ಬರುತ್ತಿದೆ. ಬಂದವರ ಉದರದ ಹಸಿವು ತಣಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗಾವಿ ಅಧಿವೇಶನ
ಬೆಳಗಾವಿ ಅಧಿವೇಶನ

ಬೆಂಗಳೂರು: ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಗಳಿಂದ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ದಂಡೇ ಕುಂದಾನಗರಿಗೆ ಹರಿದು ಬರುತ್ತಿದೆ. ಬಂದವರ ಉದರದ ಹಸಿವು ತಣಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಧಿವೇಶನಕ್ಕಾಗಿ ಹೊರಗಿನಿಂದ ಬರುವವರ ಸಂಖ್ಯೆ 5 ಸಾವಿರಕ್ಕೂ ಹೆಚ್ಚು. ಇವರಿಗೆ ಕುಂದಾನಗರಿಯಲ್ಲಿನ ವಿವಿಧ ವಸತಿಗೃಹಗಳು, ಸಮುದಾಯ ಭವನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರಿಗೆ ಎಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಪಟ್ಟಿಯನ್ನು ಆಯಾ ಇಲಾಖೆಗಳ ವಿಭಾಗೀಯ ಮುಖ್ಯಸ್ಥರಿಗೆ ಎರಡು ದಿನ ಮುಂಚೆಯೇ ಕಲ್ಪಿಸಲಾಗಿದೆ. ಒಂದುದಿನ ಮುಂಚಿತವಾಗಿಯೇ ಬಂದು ಉಳಿಯಬಹುದೆಂದು ಹೇಳಲಾಗಿದೆ. ಇದರಿಂದ ಕಾರ್ಯಕಲಾಪಗಳ ಹಂಚಿಕೆ ಸುಲಭವಾಗುತ್ತದೆ ಎಂಬ ಆಶಯವಿದೆ.

ಕರ್ತವ್ಯಕ್ಕಾಗಿ ಬಂದವರು ತಂಗಿರುವ ಸ್ಥಳ ಅಥವಾ ಸಮೀಪದ ಸ್ಥಳದಲ್ಲಿ ಬೆಳಗ್ಗೆ ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಬೇರೆಬೇರೆ ಭಾಗಗಳವರು ಬಂದಿರುವುದರಿಂದ ಅವರಿಗೆ ಅನುಕೂಲಕರವಾಗುವ ಭೋಜನವನ್ನೇ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ಉಪಹಾರ ಗೃಹದಲ್ಲಿ ಕೋವಿಡ್ ನಿಯಮಾಳಿಗಳನ್ನು ಅನುಸರಿಸಲಾಗುವುದು ಎಂದು ಸಿಬ್ಬಂದಿ ಹೇಳಿದರು.

ಮಧ್ಯಾಹ್ನದ ಊಟದ ವ್ಯವಸ್ಥೆ ಸುವರ್ಣ ವಿಧಾನಸೌಧದಲ್ಲಿ ಇರುತ್ತದೆ. ಇದಕ್ಕಾಗಿ ಇಲ್ಲಿ 500ಕ್ಕೂ ಹೆಚ್ಚು ಮಂದಿ ಬಾಣಸಿಗರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಭೋಜನ ತಯಾರಿಸುವುದಕ್ಕಾಗಿ ಎಂಥಾ ಮಳೆಗಾಳಿ ಬಂದರೂ ತಾಳುವಂಥ ಸಾಮರ್ಥ್ಯ ಇರುವ ಬೃಹತ್ ಗುಡಾರ ನಿರ್ಮಿಸಲಾಗಿದೆ.

ಸಚಿವರಿಗೆ, ಶಾಸಕರುಗಳಿಗೆ ಅಧಿಕಾರಿಗಳಿಗೆ ಮತ್ತು ಪತ್ರಕರ್ತರಿಗೆ ಬ್ಯಾಂಕ್ವೇಟ್ ಹಾಲಿನಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದಲ್ಲಿ ಭೋಜನ ಸೇವಿಸಿದ ಕೆಲವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಆದ್ದರಿಂದ ಜಿಲ್ಲಾಡಳಿತ ಆಹಾರ ಗುಣಮಟ್ಟದಲ್ಲಿ ಮುಂಜಾಗ್ರತೆ ವಹಿಸಿದೆ. ಭೋಜನ ತಯಾರಿಸಲು ಬಳಸುವ ಸಾಮಗ್ರಿಗಳ ಗುಣಮಟ್ಟ ಮತ್ತು ನಂತರ ಆಹಾರದ ಗುಣಮಟ್ಟ ತಯಾರಿಸಲು ತಜ್ಞರ ತಂಡ ರಚಿಸಲಾಗಿದೆ.

ಕರ್ತವ್ಯಕ್ಕೆ ಬಂದಿರುವ ಎಲ್ಲರಿಗೂ ಕುಡಿಯಲು ಖನಿಜಯುಕ್ತ ನೀರಿನ ವ್ಯವಸ್ಥೆ ಮಾಡಲಾಗಿದೆ. ಬೀಸಿನೀರು ಕೂಡ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧೆಡೆಗಳಿಂದ ಬಂದೋಬಸ್ತ್ ವ್ಯವಸ್ಥೆಗಾಗಿ ಬಂದಿರುವ ತನ್ನ ಸಿಬ್ಬಂದಿಗೆ ಪೊಲೀಸ್ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದೆ. ಇಲ್ಲಿಯೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com