ಕಾಮಗಾರಿಗಳಲ್ಲಿ ಶೇ.40 ಕಮಿಷನ್: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ; ತನಿಖೆಗೆ ಸರ್ಕಾರ ಸಿದ್ಧ ಎಂದ ಸಚಿವ ಈಶ್ವರಪ್ಪ
ರಾಜ್ಯ ಬಿಜೆಪಿ ಸರಕಾರ ಕಾಮಗಾರಿಗಳಲ್ಲಿ ಶೇಕಡ 40 ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.
Published: 16th December 2021 12:51 PM | Last Updated: 16th December 2021 03:01 PM | A+A A-

ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ
ಬೆಳಗಾವಿ: ರಾಜ್ಯ ಬಿಜೆಪಿ ಸರಕಾರ ಕಾಮಗಾರಿಗಳಲ್ಲಿ ಶೇಕಡ 40 ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೆಳಗಾವಿ ಗ್ರಾಮೀಣ ಜಿಲ್ಲೆ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಮೆರವಣಿಗೆ ನಡೆಯಿತು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನಾಕಾರರು ಸುವರ್ಣಸೌಧದ ಪ್ರವೇಶದ್ವಾರದೊಳಗೆ ತೆರಳಲು ಯತ್ನಿಸಿದರಾದರೂ ಪೊಲೀಸರು ಅವರನ್ನು ಗೇಟ್ ಗಳನ್ನು ಮುಚ್ಚಿ ತಡೆದರು.
ಜಲಮಂಡಳಿಯ ಪೈಪ್ ಲೈನ್ ಬದಲಾವಣೆಯ ಕಾಮಗಾರಿಗೆ ಬಿಡ್ ಸಲ್ಲಿಸುವವರೇ ಇಲ್ಲ!
— Karnataka Congress (@INCKarnataka) December 15, 2021
ಮೂರು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಬಿಡ್ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಈ ಸರ್ಕಾರದ 40% ಕಮಿಷನ್ ಸುಲಿಗೆಗೆ ಅದೆಷ್ಟು ಭಯಪಟ್ಟಿರಬಹುದು ಎಂದು ಅಂದಾಜಿಸಬಹುದು.
ಈ ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ ರಾಜ್ಯದ ಅಭಿವೃದ್ಧಿ ನಿಂತ ನೀರಾಗಿದೆ. pic.twitter.com/h0lsEuVFB6
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ , ಎಚ್.ಕೆ. ಪಾಟೀಲ್, ರಮೇಶ್ ಕುಮಾರ್ ವಿಧಾನ ಮಂಡಲದ ಉಭಯ ಸದನಗಳ ಕಾಂಗ್ರೆಸ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು. ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಪರ್ಸೆಂಟೇಜ್ ಆರೋಪ ತನಿಖೆಗೆ ಸರ್ಕಾರ ಸಿದ್ಧ: ಸಚಿವ ಈಶ್ವರಪ್ಪ
ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಶೇಕಡ 40 ರಷ್ಟು ಪರ್ಸೆಂಟೇಜ್ ಆರೋಫದ ಬಗ್ಗೆ ನ್ಯಾಯಾಂಗ ತನಿಖೆ ಮಾಡ್ಬೇಕಾ ಅಥವಾ ಸುಪ್ರೀಂ ಕೋರ್ಟ್ ಜಡ್ಜ್ ಮೂಲಕ ತನಿಖೆಯಾಗಬೇಕಾ? ಆಗಲಿ ಎಂದು ಸಚಿವ ಈಶ್ವರಪ್ಪ ಹೇಳಿದರು.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ದ 40 ಪರ್ಸೇಂಟೇಜ್ ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನವರು ಬದುಕಿದ್ದಾರೆ ಎಂದು ತೋರಿಸಲು ಹೀಗೆ ಮಾಡುತ್ತಿದ್ದಾರೆ. ಅಸೋಸಿಯೇಷನ್ ನವರು ಪತ್ರ ಬರೆದಿದ್ದಾರೆ. ನಾವು ತನಿಕೆಯನ್ನ ಸ್ವಾಗತ ಮಾಡುತ್ತೇವೆ. ತನಿಖೆಯಿಂದ ಯಾರು ಯಾರು ಎಷ್ಟು ಪರ್ಸೆಂಟೇಜ್ ತೆಗೆದುಕೊಂಡಿದ್ದಾರೋ ಗೊತ್ತಾಗುತ್ತದೆ. ಕಾಂಗ್ರೆಸ್ ನವರೇ ಸಿಕ್ಕಿಬಿಳುತ್ತಾರೆ ಎಂದು ಹೇಳಿದರು.
ಈ ಬಗ್ಗೆ ಅಧಿವೇಶನದಲ್ಲಿ ಅವರು ಚರ್ಚೆ ಮಾಡಲಿ. ಸರ್ಕಾರ ಚರ್ಚೆಗೆ ಸಿದ್ಧವಿದೆ. ಯಾವ ಇಲಾಖೆ ಯಾವ ಯೋಜನೆಗೆ ಎಷ್ಟು ಕೊಟ್ಟಿದ್ದಾರೆ ಅಂತ ಹೇಳಿದ್ದಾರಾ..? ಆದರೆ ಕಾಂಗ್ರೆಸ್ ನವರು ಟ್ರ್ಯಾಕ್ಟರ್ ರ್ಯಾಲಿ ಮಾಡ್ತಿರೋದು ನಾಟಕ ಅಷ್ಟೇ ಎಂದು ವ್ಯಂಗ್ಯವಾಡಿದರು.
ಈ ಪರ್ಸೆಂಟೇಜ್ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ನವರು ಕೇಳ್ತಿದ್ದಾರೆ ಈ ಬಗ್ಗೆ ಮುಖ್ಯಮಂತ್ರಿ ಗಳು ತೀರ್ಮಾನ ಮಾಡುತ್ತಾರೆ. ಆದರೆ ಈ ಬಗ್ಗೆ ತನಿಖೆ ಆದರೆ ಕಾಂಗ್ರೆಸ್ ನವರಿಗೆ ಶಿಕ್ಷೆ ಆಗೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಅಶೋಕ್ ಪ್ರತಿಕ್ರಿಯೆ:
ಪ್ರತಿಭಟನೆ ನಡೆಸಲು ಕಾಂಗ್ರೆಸ್ ನವರಿಗೆ ನೈತಿಕ ಅಧಿಕಾರ ಇಲ್ಲ. ಅವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗಿದೆ. ಅವರೇ ದೊಡ್ಡ ಭ್ರಷ್ಟಾಚಾರದ ಪಿತಾಮಹರು. ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಇದ್ದಾಗ ಹಲವು ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ ಅವ್ರು ಮಾಡುವ ಆರೋಪಗಳಿಗೆ ಯಾವುದೇ ದಾಖಲೆ ಇಲ್ಲ.
Revenue Minister @RAshokaBJP termed Congress as ‘Father of Corruption’ & challenged the grand-old party to produce valid documents to prove the irregularities in the government. @XpressBengaluru @KannadaPrabha @naushadbijapur @Arunkumar_TNIE @pramodvaidya06 pic.twitter.com/57jrdI5QvG
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) December 16, 2021
ಕಾಂಗ್ರೆಸ್ ನವರೇ ಪರ್ಸೆಂಟೇಜ್ ಬಗ್ಗೆ ದೂರು ಕೊಡಿಸಿರೋದು. ಕಾಂಗ್ರೆಸ್ ಬುದ್ದಿಯೇ ಗಾಳಿಯಲ್ಲಿ ಗುಂಡಿ ಹೊಡೆಯೋದು. ಅವರು ಆರೋಪಕ್ಕೆ ತಕ್ಮಂತೆ ಸೂಕ್ತ ದಾಖಲೆ ಕೊಡಲಿ. ಅವರು ದಾಖಲೆ ಕೊಟ್ಟರೆ, ಅವ್ರ ಬಣ್ಣವೇ ಬಯಲು ಆಗುತ್ತೆ ಎಂಬ ಭಯ ಅವರಿಗಿದೆ. ಬಿಟ್ ಕಾಯಿನ್ ಅಂತಿದ್ದರು, ಬಿಟ್ಟೂ, ಇಲ್ಲ ಕಾಯಿನ್ನೂ ಇಲ್ಲ. ಅವರು ಸದನದಲ್ಲಿ ಮಾತಾಡಿದರೆ, ನಾವು ಕೂಡ ಸದನದಲ್ಲಿ ಅವರ ಆಡಳಿತದಲ್ಲಿನ ಪರ್ಸೆಂಟೇಜ್ ದಾಖಲೆ ಬಿಡುಗಡೆ ಮಾಡ್ತೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.