ಕೇಂದ್ರದಿಂದ ರಾಜ್ಯಕ್ಕೆ ಅತ್ಯಲ್ಪ ಪರಿಹಾರ: ಕಾಂಗ್ರೆಸ್ ತೀವ್ರ ಕಿಡಿ

ಭಾರೀ ಮಳೆ, ಪ್ರವಾಹದಿಂದ ರಾಜ್ಯ ಬಳಲುತ್ತಿದ್ದರೂ ಕೇಂದ್ರ ಸರ್ಕಾರ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ (ಎಸ್‌ಡಿಆರ್‌ಎಫ್) ಅತ್ಯಲ್ಪ ಪರಿಹಾರ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ

ಬೆಳಗಾವಿ: ಭಾರೀ ಮಳೆ, ಪ್ರವಾಹದಿಂದ ರಾಜ್ಯ ಬಳಲುತ್ತಿದ್ದರೂ ಕೇಂದ್ರ ಸರ್ಕಾರ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ (ಎಸ್‌ಡಿಆರ್‌ಎಫ್) ಅತ್ಯಲ್ಪ ಪರಿಹಾರ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಎಡೆಬಿಡದೆ ಸುರಿದ ಮಳೆ ಮತ್ತು ಪ್ರವಾಹದಿಂದ ಬೆಳೆ ನಷ್ಟ ಮತ್ತು ಮನೆ ಹಾನಿ ಕುರಿತು ಸದನದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬೈರೇಗೌಡ ಅವರು, ಇತರ ರಾಜ್ಯಗಳಿಗೆ ಹೋಲಿಸಿದರೆ, ಪ್ರಮುಖವಾಗಿ ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ 15ನೇ ಹಣಕಾಸು ಆಯೋಗವು ಎಸ್‌ಡಿಆರ್‌ಎಫ್ ಅಡಿಯಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಪರಿಹಾರವು ಅತ್ಯಲ್ಪವಾಗಿದೆ. ಮಹಾರಾಷ್ಟ್ರಕ್ಕೆ ನಿಗದಿಪಡಿಸಿದ ರೂ.3,222 ಕೋಟಿಗೆ ಹೋಲಿಸಿದರೆ ರಾಜ್ಯಕ್ಕೆ ವಾರ್ಷಿಕವಾಗಿ ಕೇವಲ 791 ಕೋಟಿ ರೂಪಾಯಿ ನೀಡಲಾಗುತ್ತಿದೆ. ವಿಪತ್ತುಗಳನ್ನು ಗಣನೆಗೆ ತೆಗೆದುಕೊಂಡರೆ, ರಾಜ್ಯಕ್ಕೆ ಹೆಚ್ಚು ಪರಿಹಾರ ಬಿಡುಗಡೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಬೆಳೆ ನಷ್ಟದ ಸಮೀಕ್ಷೆಯನ್ನು ಅಧಿಕಾರಿಗಳು ನಡೆಸುತ್ತಿದ್ದರೂ ಅದು ಅಸಮರ್ಪಕವಾಗಿದೆ. ಸಾಕಷ್ಟು ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಮತ್ತೆ ಹೊಸದಾಗಿ ಸಮೀಕ್ಷ ನಡೆಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಎಲ್ಲ ಬೆಳೆಗಳಿಗೂ ವಿಮೆ ಕಡ್ಡಾಯ ಮಾಡುವುದರ ಜತೆಗೆ ಅದರ ವಿಮಾ ಕಂತುಗಳನ್ನೂ ಸರ್ಕಾರವೇ ಪಾವತಿಸಬೇಕು ಎಂದು  ಆಗ್ರಹಿಸಿದರು.

ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ರೈತರ ಬದುಕು ಗಾಳಿಗೆ ಒಡ್ಡಿದ ದೀಪದಂತೆ ಆಗಿದೆ. ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಅಡಿಕೆ, ಏಲಕ್ಕಿ ಬೆಳೆಗಳು ನಾಶವಾಗಿವೆ. ಕಾಫಿ ಬೆಳೆಗಾರರಿಗೆ ಎನ್‌ಡಿಆರ್‌ಎಫ್‌ ಅಡಿ ಎರಡು ಹೆಕ್ಟೇರ್‌ಗೆ ರೂ.18 ಸಾವಿರ ಪರಿಹಾರ ನೀಡಲಾಗುತ್ತದೆ. ಇದು ಏನೇನೂ ಸಾಲದು. ಆದ್ದರಿಂದ ಕಾಫಿಯನ್ನು ಫಸಲ್‌ ಭಿಮಾ ಯೋಜನೆ ವ್ಯಾಪ್ತಿ ಅಡಿ ತರಬೇಕು. ಮತ್ತೊಂದು ಕಡೆ ಟೊಮೇಟೋ ಬೆಳೆದವರೂ ಕಣ್ಣೀರು ಹಾಕುವ ಸ್ಥಿತಿ ಬಂದಿದೆ.

ಒಂದು ಕಿ.ಲೋ ಟೊಮೇಟೊಗೆ ರೂ.104 ಕೊಟ್ಟು ಗ್ರಾಹಕ ಖರೀದಿಸುತ್ತಾನೆ. ಆದರೆ ರೈತನಿಗೆ ಕೇವಲ ರೂ.6 ಸಿಗುತ್ತದೆ. ಉಳಿದ ರೂ.98 ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು. ಅಲ್ಲದೆ, ರಾಜ್ಯದಲ್ಲಿ ಬೆಳೆ ನೀತಿಯನ್ನು ರೂಪಿಸುವುದರ ಜತೆಗೆ ಬೆಲೆ ನೀತಿಯನ್ನೂ ಜಾರಿಗೆ ತರಬೇಕು ಎಂದೂ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com