ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊದಲು ಡೆಲ್ಟಾ, ನಂತರ ಓಮಿಕ್ರಾನ್: ಒಂದೇ ವರ್ಷದಲ್ಲಿ ಎರಡು ಬಾರಿ ಕೋವಿಡ್ ಸೋಂಕು ಬಂದ ವ್ಯಕ್ತಿ ಗುಣಮುಖವಾಗಿದ್ದು ಹೇಗೆ?

ಇತ್ತೀಚೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿದ್ದ ರಾಜ್ಯದ ಮೂರನೇ ಓಮಿಕ್ರಾನ್ ರೋಗಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿಗೆ ಸಹ ತುತ್ತಾಗಿದ್ದರು.

ಬೆಂಗಳೂರು: ಇತ್ತೀಚೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿದ್ದ ರಾಜ್ಯದ ಮೂರನೇ ಓಮಿಕ್ರಾನ್ ರೋಗಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿಗೆ ಸಹ ತುತ್ತಾಗಿದ್ದರು.

ಅವರು ಕೋವಿಡ್ ನ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದರು. ಈ ಬಗ್ಗೆ ರೋಗಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದ ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ತನಗೆ ಓಮಿಕ್ರಾನ್ ಸೋಂಕು ಸೌಮ್ಯ ರೂಪದಲ್ಲಿ ಕಾಣಿಸಿಕೊಂಡಿತ್ತು, ಈಗ ಚೆನ್ನಾಗಿ ಗುಣಮುಖ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ಹೆಸರು ಮತ್ತು ಹೆಚ್ಚಿನ ವಿವರ ನೀಡದಿರುವ 34 ವರ್ಷದ ರೋಗಿ ಮಾಸ್ಕ್ ಧರಿಸಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ತೆಗೆದುಕೊಂಡ ಚಿಕಿತ್ಸೆ ಮತ್ತು ಗುಣಮುಖವಾದ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆ ನನಗೆ ಡೆಲ್ಟಾ ಕೊರೋನಾ ರೂಪಾಂತರಿ ಸೋಂಕು ಕಳೆದ ಏಪ್ರಿಲ್ ತಿಂಗಳಲ್ಲಿ ತಗುಲಿತ್ತು, ಈಗ ಓಮಿಕ್ರಾನ್ ಸೋಂಕು ಕೂಡ ಬಂದಿದೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ನಾನು ಕೋವಿಡ್ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದೆ. ಅದರ ಹೊರತಾಗಿಯೂ ಈಗ ಓಮಿಕ್ರಾನ್ ಸೋಂಕು ತಗುಲಿದೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಸೋಂಕು ಬಂದಿರಬೇಕು. ಓಮಿಕ್ರಾನ್ ಗಿಂತ ಡೆಲ್ಟಾ ರೂಪಾಂತರಿ ಬಂದಿದ್ದಾಗ ಹೆಚ್ಚು ಗಂಭೀರವಾಗಿತ್ತು, ಈ ಬಾರಿ ರೋಗಲಕ್ಷಣ ಸೌಮ್ಯ ಸ್ವರೂಪದಲ್ಲಿತ್ತು ಎಂದು ವಿವರಿಸಿದ್ದಾರೆ.

ಎರಡೂ ಬಾರಿ ಕೂಡ ವೈರಸ್ ನ ಲಕ್ಷಣ ಹೆಚ್ಚು ಕಡಿಮೆ ಒಂದೇ ರೀತಿಯಾಗಿತ್ತು. ಆದರೆ ಈ ಹಿಂದೆ ಡೆಲ್ಟಾ ರೂಪಾಂತರಿಯಲ್ಲಿ ಹೆಚ್ಚು ಸಮಸ್ಯೆಯಾಗಿತ್ತು. ಆದರೆ ಈ ಬಾರಿ ಗಂಟಲು ಕೆರೆತ, ಕಫ, ಸುಸ್ತು ಮಾತ್ರ ಕಾಣಿಸಿಕೊಂಡಿದ್ದು ಅದಕ್ಕೆ ಬೇರೆ ಪ್ರತ್ಯೇಕ ಚಿಕಿತ್ಸೆಯಿರಲಿಲ್ಲ. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿರಲಿಲ್ಲ, ಆದರೂ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಓಮಿಕ್ರಾನ್ ಗೆ ಬೇರೆ ಚಿಕಿತ್ಸೆಯಿಲ್ಲ: ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಪ್ರತ್ಯೇಕ ಚಿಕಿತ್ಸೆಯಿಲ್ಲ, ವಿಟಮಿನ್ ಸಿ ಮಾತ್ರೆ ಮತ್ತು ಆಂಟಿಬಯೊಟಿಕ್ಸ್ ಮಾತ್ರ ನೀಡಲಾಗಿದೆ. ಹೆಚ್ಚು ಸುಸ್ತು ಮತ್ತು ರೋಗಲಕ್ಷಣ ಕಡಿಮೆಯಾಗಿದ್ದರಿಂದ ಒಂದು ವಾರ ಆಫೀಸು ಕೆಲಸವನ್ನು ಆಸ್ಪತ್ರೆಯ ವಾರ್ಡ್ ನಿಂದ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ವಿದೇಶಗಳಿಂದ ಬರುವವರು ಪ್ರತ್ಯೇಕವಾಗಿರಿ: ವಿದೇಶಗಳಿಂದ ಬಂದು ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೂ ಪ್ರತ್ಯೇಕವಾಗಿ ಇರುವ ಬಗ್ಗೆ ಸಲಹೆ ನೀಡಿದ ಅವರು, ದಕ್ಷಿಣ ಆಫ್ರಿಕಾದಿಂದ ಬಂದ ಮೇಲೆ ನಾನು ಐಸೊಲೇಟ್ ಆಗಿ ಉಳಿದುಕೊಂಡೆ. ಹೀಗಾಗಿ ನನ್ನ ಕುಟುಂಬದವರಿಗೆ ಸೋಂಕು ತಗಲಲಿಲ್ಲ. ವಿದೇಶಗಳಿಂದ ಪ್ರಯಾಣ ಮಾಡಿ ಬಂದವರು ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕವಾಗಿ ಕೆಲ ದಿನಗಳ ಮಟ್ಟಿಗೆ ಇದ್ದು, ಕ್ವಾರಂಟೈನ್ ಗೆ ಒಳಗಾಗುವುದು ಉತ್ತಮ. ಓಮಿಕ್ರಾನ್ ರೋಗಲಕ್ಷಣ ಕಂಡುಬಂದರೆ ಹಿಂದೆಮುಂದೆ ಯೋಚಿಸದೆ ನಿರ್ಲಕ್ಷ್ಯ ಮಾಡದೆ ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಬಂದರೆ ಕೂಡಲೇ ಆರೋಗ್ಯಾಧಿಕಾರಿಗಳಿಗೆ ತಿಳಿಸಿ. ಹೀಗೆ ಪ್ರತಿಯೊಬ್ಬರೂ ಮಾಡಿದರೆ ಸೋಂಕನ್ನು ತಡೆಗಟ್ಟಿ ನಮ್ಮನ್ನು ಸುತ್ತಮುತ್ತಲಿರುವವರನ್ನು, ಸಮಾಜವನ್ನು ಸುರಕ್ಷಿತವಾಗಿ ಇಡಬಹುದು ಎನ್ನುತ್ತಾರೆ.

ಕಳೆದ ಮಂಗಳವಾರ ಇವರ ಆರ್ ಟಿ-ಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ. ಆರೋಗ್ಯವಾಗಿದ್ದಾರೆ ಎಂದು ಎಕ್ಸ್ ರೇ, ಎರಡು ಬಾರಿ ರಕ್ತ ಪರೀಕ್ಷೆ ಮಾಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 

ವೈದ್ಯ ಬಿಡುಗಡೆ: ಇನ್ನು ಯಾವುದೇ ಪ್ರಯಾಣ ಮಾಡದೆ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಬೆಂಗಳೂರು ಮೂಲದ ವೈದ್ಯ ಮೊನ್ನೆ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್ ನೆಗೆಟಿವ್ ಬಂದರೂ ಅವರು ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು. ನಂತರ ಕೋವಿಡ್ ವೈರಸ್ ಸೋಂಕಿನ ಲಕ್ಷಣ ಅವರಲ್ಲಿ ಕಂಡುಬಂದಿತ್ತು. ನಂತರ ಆಂಟಿಬಯೊಟಿಕ್ಸ್ ನೀಡಿದ ನಂತರ ವೈದ್ಯರು ಪರೀಕ್ಷೆ ಮಾಡಿ ಸೋಂಕಿನ ಲಕ್ಷಣಗಳಿಲ್ಲ ಎಂದು ನೆಗೆಟಿವ್ ವರದಿ ನೀಡಿದ ನಂತರವಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com