ನಗರ ಸ್ಥಳೀಯ ಸಂಸ್ಥೆಗಳಿಗೆ ಶುಭ ಸುದ್ದಿ: ಶೀಘ್ರ ನಗರೋತ್ಥಾನ-4ನೇ ಹಂತದ ಯೋಜನೆ ಜಾರಿ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ನಗರೋತ್ಥಾನ-4ನೇ ಹಂತದ ಯೋಜನೆ ಜಾರಿಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಮುಖ್ಯಮಂತ್ರಿಮಟ್ಟದಲ್ಲಿ ಸಭೆ ನಡೆಸಲಾಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು...
Published: 17th December 2021 03:24 PM | Last Updated: 17th December 2021 03:24 PM | A+A A-

ಎಂಟಿಬಿ ನಾಗರಾಜ್
ಬೆಳಗಾವಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ನಗರೋತ್ಥಾನ-4ನೇ ಹಂತದ ಯೋಜನೆ ಜಾರಿಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಮುಖ್ಯಮಂತ್ರಿಮಟ್ಟದಲ್ಲಿ ಸಭೆ ನಡೆಸಲಾಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಶುಕ್ರವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂಟಿಬಿ, ನಗರೋತ್ಥಾನ ಮೂರನೇ ಹಂತ 2015-16ರಲ್ಲಿ ಆರಂಭವಾಗಿ 2020-21ರಲ್ಲಿ ಅಂತ್ಯ ಆಗಿದೆ. ನಗರೋತ್ಥಾನ 3ನೇ ಹಂತದಲ್ಲಿ ಪ್ರತಿ ವರ್ಷ ಕೂಡ ಪಟ್ಟಣ ಪಂಚಾಯಿತಿ, ನಗರಸಭೆಗಳಿಗೆ ಜನಸಂಖ್ಯೆ ಅನುಗುಣವಾಗಿ ನಿಗದಿಪಡಿಸಿದ ಹಣ ಬಿಡುಗಡೆ ಮಾಡಲಾಗಿದೆ. ಇನ್ನು ಕೆಲವು ನಗರಸಭೆಗಳಲ್ಲಿ ಹರಾಜಾಗಿ ಪೂರ್ಣ ಪ್ರಮಾಣದ ಕಾಮಗಾರಿ ಕೈಗೊಳ್ಳುವುದು ಆಗಿಲ್ಲ. ಅಂತಹ ನಗರಸಭೆಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದರು.
ಇದನ್ನು ಓದಿ: ಪಿಪಿಪಿ ಮಾದರಿಯಲ್ಲಿ ರಾಜ್ಯದಲ್ಲಿ 9 ವೈದ್ಯಕೀಯ ಕಾಲೇಜುಗಳ ನಿರ್ಮಾಣ: ಸಚಿವ ಸುಧಾಕರ್
ಈಗಾಗಲೇ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ನಗರೋತ್ಥಾನ 4ನೇ ಹಂತದ ಯೋಜನೆಯನ್ನು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಎಂಬ ಹೆಸರಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ನಗರೋತ್ಥಾನ-4ನೇ ಹಂತದ ಯೋಜನೆಯನ್ನು ರಾಜ್ಯದ ಎಲ್ಲ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.
4ನೇ ಹಂತದ ಯೋಜನೆಗೆ ಬಗ್ಗೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳ ಜೊತೆ ಎರಡು ಬಾರಿ ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿನ 315 ಪಟ್ಟಣ ಪಂಚಾಯಿತಿಗಳು, ನಗರಸಭೆಗಳು, ಗ್ರೇಡ್ 1 ನಗರಸಭೆಗಳಿಗೆ ಅಭಿವೃದ್ಧಿಗಾಗಿ 4ನೇ ಹಂತದ ನಗರೋತ್ಥಾನ ಯೋಜನೆಯನ್ನು ಜಾರಿ ಮಾಡಬೇಕೆನ್ನುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇದೆ. ಈ ಬಗ್ಗೆ ಎರಡು-ಮೂರು ಸಭೆಗಳನ್ನು ಮಾಡಿದ್ದೇವೆ. ಇದನ್ನು ಆದಷ್ಟು ಬೇಗ ಅಂದರೆ ಮುಂದಿನ ವರ್ಷದ ಬಜೆಟ್ ಆದ ಮೇಲೆ ಅನುಷ್ಠಾನಕ್ಕೆ ತರಬೇಕೆಂಬ ಚಿಂತನೆಯಲ್ಲಿದೆ ಎಂದು ಸಚಿವರು ತಿಳಿಸಿದರು.