ಗೌರಿಬಿದನೂರಿನಲ್ಲಿ ಎಲೆಕ್ಟ್ರಿಕಲ್ ವಾಹನ ಉತ್ಪಾದನಾ ಘಟಕ: ಸಚಿವ ನಿರಾಣಿ ಘೋಷಣೆ
ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ವಾಹನಗಳ ಉತ್ಪಾದನಾ ಘಟಕ ಆರಂಭಿಸಲು ಕ್ರಮ ವಹಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರು ಭರವಸೆ ನೀಡಿದರು.
Published: 18th December 2021 12:59 AM | Last Updated: 18th December 2021 01:00 AM | A+A A-

ಎಲೆಕ್ಟ್ರಿಕಲ್ ವಾಹನ ಉತ್ಪಾದನಾ ಘಟಕ
ಬೆಳಗಾವಿ: ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ವಾಹನಗಳ ಉತ್ಪಾದನಾ ಘಟಕ ಆರಂಭಿಸಲು ಕ್ರಮ ವಹಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರು ಭರವಸೆ ನೀಡಿದರು.
ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಒಂದು ತಿಂಗಳ ಒಳಗಾಗಿ ಕುಡುಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಡಿರುವ ಗೌಡಸಂಘ, ಮತ್ತು ದೊಡ್ಡಕುರುಗೊಡು ಗ್ರಾಮಗಳ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದರು. ಕುಡಮಲಕುಂಟೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಬಂಡವಾಳಗಾರರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಕಾಯ್ದಿಟ್ಟ ಭೂಮಿಗಳಲ್ಲಿ ಸಮಗ್ರ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆಗೆ ಉದ್ದಿಮೆಗಳನ್ನು ಆಹ್ವಾನಿಸಲಾಗುವುದು. ಇದರಿಂದ ಕೈಗಾರಿಕೆಯ ಜೊತೆಗೆ ಅಲ್ಲಿ ದುಡಿಯುವ ಕಾರ್ಮಿಕರಿಗೆ ವಸತಿ ಸೇರಿದಂತೆ ನಾಗರಿಕ ಸೌಲಭ್ಯಗಳ ಒಳಗೊಂಡ ಕೈಗಾರಿಕಾ ಟೌನ್‍ಶಿಪ್ ಸ್ಥಾಪಿಸುವುದರಿಂದ ಸಾಗಾಣಿಕೆ ವೆಚ್ಚ, ಸಂಚಾರಿ ವ್ಯವಸ್ಥೆ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕೈಗಾರಿಕೆಗಳಿಂದ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ: ಸಚಿವ ಮುರುಗೇಶ್ ನಿರಾಣಿ
ರೈತರಿಗೆ ನೇರ ಹಣ ವರ್ಗಾವಣೆ: ಕೈಗಾರಿಕೆಗಳಿಗೆ ಭೂಸ್ವಾಧೀನ ಸಂದರ್ಭದಲ್ಲಿ ನೇರವಾಗಿ ರೈತರೊಂದಿಗೆ ವ್ಯವಹಾರ ಮಾಡಲಾಗುತ್ತದೆ. ಅವರ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಇದರಿಂದ ಪರಿಹಾರ ಹಣ ಪಡೆಯುವಲ್ಲಿ ರೈತರು ಲಂಚಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಮುರಗೇಶ್ ನಿರಾಣಿ ಸ್ಪಷ್ಟಪಡಿಸಿದರು.
ಹರಿಹರದ ಶಾಸಕರಾದ ಡಾ.ಎಸ್.ರಾಮಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಮಟ್ಟದ ಏಕಗವಾಕ್ಷಿ ಸಮತಿಯಲ್ಲಿ ಹರಿಹರ ತಾಲೂಕಿನಲ್ಲಿ ಈವರೆಗೆ 16 ಕೈಗಾರಿಕೆಗಳಿಗೆ ಅನುಮೋದನೆ ನೀಡಲಾಗಿದೆ. ರೂ. 217.34 ಕೋಟಿ ಬಂಡವಾಳ ಹೂಡುವ ನಿರೀಕ್ಷೆಯಿದೆ. 908 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಪ್ರಸ್ತುತ 9 ಯೋಜನೆಗಳು ಅನುಷ್ಠಾನಗೊಂಡಿದೆ. ರೂ.93.38 ಕೋಟಿ ಬಂಡವಾಳ ಹೂಡಿಕೆಯಾಗಿದೆ. 500 ಜನರಿಗೆ ಉದ್ಯೋಗ ಅವಕಾಶಗಳು ನೀಡಲಾಗಿದೆ. ಇದಲ್ಲದ ಎರಡು ಬೃಹತ್ ಕೈಗಾರಿಕೆಗಳಿಗೆ ಅನುಮೋದನೆ ನೀಡಿದ್ದು, 1596 ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ.
581 ಜನರಿಗೆ ಉದ್ಯೋಗ ದೊರಕಲಿದೆ. ಈ ಪೈಕಿ ಕಾರ್ಗಿಲ್ ಇಂಡಿಯಾ ಪ್ರೈವೆಟ್ ಸ್ಟಾರ್ಚ್ ಘಟಕವು ಅನುಷ್ಠಾನಗೊಂಡಿದೆ. 630 ಕೋಟಿ ಬಂಡವಾಳ ಹೂಡಿದೆ. 510 ಜನರಿಗೆ ಉದ್ಯೋಗ ನೀಡಲಾಗಿದೆ. ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳೂರು ರಿಫೈನರ್ ಆ್ಯಂಡ್ ಪೆಟ್ರೋಕೆಮಿಕಲ್ ಕಂಪನಿ ರೂ.966 ಕೋಟಿ ವೆಚ್ಚದಲ್ಲಿ 2ಜಿ ಎಥೇನಾಲ್ ಘಟಕ ಸ್ಥಾಪನೆಗೆ ಮಂಜೂರಾತಿ ನೀಡಿದೆ. ಈಗಾಗಲೇ 47 ಎಕರೆ ಜಮೀನು ಲೀಸ್ ಡೀಡ್ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.