ಕನ್ನಡಿಗರ ರಕ್ಷಣೆ ನಮ್ಮ ಹೊಣೆ, 'ಮಹಾ' ಸರ್ಕಾರದೊಂದಿಗೆ ಗೃಹ ಕಾರ್ಯದರ್ಶಿ, ಡಿಜಿ ಮಾತುಕತೆ: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಳಗಾವಿ: ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದ ಸಿಎಂ, ಕೆಲವರು ಕಾನೂನು ಬಾಹಿರವಾಗಿ ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ತೆ ಕಾಪಾಡಿಕೊಳ್ಳುವುದು ಅಲ್ಲಿನ ಸರ್ಕಾರದ ಜವಾಬ್ದಾರಿ ಎಂದರು.

ಅಲ್ಲಿನ ಕನ್ನಡಿಗರ ರಕ್ಷಣೆ ಹಾಗೂ ಬಸ್ಸು ಇತ್ಯಾದಿ ವಾಹನಗಳ ರಕ್ಷಣೆ ಮಾಡಲು ನಮ್ಮ ಪೋಲಿಸ್ ಮಹಾ ನಿರ್ದೇಶಕರು ಅಲ್ಲಿನ ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ನಮ್ಮ ಗೃಹ ಕಾರ್ಯದರ್ಶಿಗಳು ಮಹಾರಾಷ್ಟ್ರದ ಗೃಹ ಕಾರ್ಯದರ್ಶಿಯೊಂದಿಗೆ ಮಾತನಾಡಲಿದ್ದಾರೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯ ಬಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ನಾನು ಮಾತನಾಡುತ್ತೇನೆ ಎಂದರು.

ಶಿವಸೇನೆಯ ಸಂಜಯ್ ರಾವತ್ ಅವರು ಮರಾಠಿಗಳು ಒಂದಾಗುವಂತೆ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜವಾಬ್ದಾರಿ ಇರುವ ಜನರು ಯಾರನ್ನೂ ಯಾವ ಸಮಯದಲ್ಲಿಯೂ ಪ್ರಚೋದನೆ ಮಾಡಬಾರದು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ದೇಶವನ್ನು ಒಗ್ಗೂಡಿಸಿದವರು. ಅವರ ಹೆಸರಿನಲ್ಲಿ ನಾವು ಜಗಳವಾಡಿಕೊಂಡು ಒಡಕು ಮೂಡಿಸಿದರೆ ಅದು ಅವರ ಹೋರಾಟಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಕಾನೂನನ್ನ ಕೈಗೆ ತೆಗೆದುಕೊಂಡು ಯಾರನ್ನೂ ಇಂತಹ ಕೆಲಸಗಳನ್ನು ಮಾಡಲು ಕುಮ್ಮಕ್ಕು ನೀಡಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com