ಕನ್ನಡ ವಿಶ್ವವಿದ್ಯಾಲಯ ರಕ್ಷಿಸಿ: ಬರಗೂರು

ಕನ್ನಡ ವಿಶ್ವವಿದ್ಯಾಲಯದ ವಿವಾದಿತ ಸಮಸ್ಯೆಗಳನ್ನು ಪರಿಹರಿಸಿ, ವಿವಿಯನ್ನು ಕೂಡಲೇ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಬಂಡಾಯ ಸಾಹಿತ್ಯ ಸಂಘಟನೆ-ಕರ್ನಾಟಕದ ವತಿಯಿಂದ ಬರಹಗಾರ ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿಗೆ ಹಾಗೂ ಉನ್ನತ ಶಿಕ್ಷಣ ಶಿಕ್ಷಣ ಸಚಿವರಿಗೆ ಶನಿವಾರ ಪತ್ರ ಬರೆದಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ
ಕನ್ನಡ ವಿಶ್ವವಿದ್ಯಾಲಯ

ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯದ ವಿವಾದಿತ ಸಮಸ್ಯೆಗಳನ್ನು ಪರಿಹರಿಸಿ, ವಿವಿಯನ್ನು ಕೂಡಲೇ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಬಂಡಾಯ ಸಾಹಿತ್ಯ ಸಂಘಟನೆ-ಕರ್ನಾಟಕದ ವತಿಯಿಂದ ಬರಹಗಾರ ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿಗೆ ಹಾಗೂ ಉನ್ನತ ಶಿಕ್ಷಣ ಶಿಕ್ಷಣ ಸಚಿವರಿಗೆ ಶನಿವಾರ ಪತ್ರ ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಇದು ಕನ್ನಡ ಸಾಂಸ್ಕøತಿಕ ಲೋಕವು ತಲೆ ತಗ್ಗಿಸುವಂತೆ ಮಾಡುತ್ತಿದೆ. ವೈಯಕ್ತಿಕ ಮತ್ತು ಸಾಂಸ್ಥಿಕ ವಿವಾದಗಳು ಒಂದು ಕಡೆಯಾದರೆ, ಕನ್ನಡ ವಿವಿಗೆ ಅನುದಾನದ ಕೊರತೆಯುಂಟಾಗಿ ಬೋಧಕರು, ಬೋಧಕೇತರರು, ಸಂಶೋಧನಾ ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬೇರೆ ಸಾಮಾನ್ಯ ವಿವಿಗಳಿಗೆ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಿಂದ ಸಾಕಷ್ಟು ಆರ್ಥಿಕ ಬಲ ಬರುತ್ತದೆ. ಆದರೆ ಕನ್ನಡ ವಿವಿಯು ಪ್ರಧಾನವಾಗಿ ಸಂಶೋಧನಾ ವಿವಿಯಾದ್ದರಿಂದ ಸರಕಾರ ನೀಡುವ ಅನುದಾನವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನುದಾನವು ಪೂರ್ಣ ಪ್ರಮಾಣದಲ್ಲಿ ವಿಶ್ವವಿದ್ಯಾಲಯಕ್ಕೆ ಲಭ್ಯವಾಗಲಿಲ್ಲವೆಂದರೆ ಹೇಗೆ ಎಂದು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.

ಅನುದಾನ ಬಾರದ ಹಿನ್ನೆಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ 36 ತಿಂಗಳಿನಿಂದ ಶಿಷ್ಯವೇತನ ನೀಡಿಲಾಗಿಲ್ಲ. ಜತೆಗೆ ಬೋಧಕ ಮತ್ತು ಬೋಧಕೇತರರಿಗೂ ಕೆಲವು ತಿಂಗಳ ವೇತನ ನೀಡಿಲ್ಲವೆಂದು ಹೇಳಲಾಗಿದೆ. ಕನ್ನಡದ ಮೂಲಕ ಸ್ಥಳೀಯ ಹಾಗೂ ಜಾಗತಿಕ ಜ್ಞಾನವನ್ನು ನೀಡುವ ಮಹದುದ್ದೇಶದಿಂದ ಆರಂಭವಾದ ಕನ್ನಡ ವಿವಿಗೆ ಇಂಥ ಆರ್ಥಿಕ ದುಃಸ್ಥಿತಿ ಬರಬಾರದು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯವಾದ ಪೂರ್ಣ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸುತ್ತೇನೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸರಕಾರದ ಕನ್ನಡಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಮತ್ತು ಪ್ರಶ್ನಾರ್ಹವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೂರ್ಣ ಅನುದಾನ ಬಿಡುಗಡೆ ಮಾಡುವುದರ ಜತೆಗೆ ನಿತ್ಯ ವಿವಾದದಿಂದ ಕೆಟ್ಟ ಹೆಸರಿಗೆ ಕಾರಣವಾಗುತ್ತಿರುವ ಕನ್ನಡ ವಿವಿಯ ಘನತೆಯನ್ನು ಕಾಪಾಡುವ ಸಲುವಾಗಿ ಒಂದು ಸೂಕ್ತ ಸಮಿತಿಯನ್ನು ನೇಮಿಸಿ ವಿವಾದಿತ ವಿದ್ಯಮಾನಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸಲು ಕ್ರಮ ಕೈಗೊಳ್ಳಬೇಕೆಂದು ಬರಗೂರು ರಾಮಚಂದ್ರಪ್ಪ ವಿನಂತಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com