ಸಾಂಕ್ರಾಮಿಕ ಎಫೆಕ್ಟ್: ಅಪ್ರಾಪ್ತ ಬಾಲಕಿಯರ ವಿವಾಹ ಸಂಖ್ಯೆಯಲ್ಲಿ ಹೆಚ್ಚಳ!

ಕಳೆದ ಎರಡು ವರ್ಷಗಳಲ್ಲಿ ತನ್ನ ಹಳ್ಳಿಯಲ್ಲಿ 21 ಅಪ್ರಾಪ್ತ ಬಾಲಕಿಯರು ಮದುವೆಯಾಗಿರುವುದಾಗಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮುಂದೆ ಇತ್ತೀಚಿಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಬಳ್ಳಾರಿ ಜಿಲ್ಲೆಯ ಜಿಗಳೂರು ಹಳ್ಳಿಯ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ತನ್ನ ಹಳ್ಳಿಯಲ್ಲಿ 21 ಅಪ್ರಾಪ್ತ ಬಾಲಕಿಯರು ಮದುವೆಯಾಗಿರುವುದಾಗಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮುಂದೆ ಇತ್ತೀಚಿಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಬಳ್ಳಾರಿ ಜಿಲ್ಲೆಯ ಜಿಗಳೂರು ಹಳ್ಳಿಯ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ.

ಮಕ್ಕಳಲ್ಲಿ ಸಾಂಕ್ರಾಮಿಕ ಪರಿಣಾಮ ಕುರಿತಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಾರ್ವಜನಿಕ ವಿಚಾರಣೆಯನ್ನು ಆಯೋಜಿಸಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ನವೆಂಬರ್ 6 ರಂದು ನಡೆದ ವಿಚಾರಣೆ ವೇಳೆ, ಸಾಂಕ್ರಾಮಿಕ ಆರಂಭವಾದಾಗಿನಿಂದ ತಮ್ಮೂರಿನಲ್ಲಿ 21 ಅಪ್ರಾಪ್ತ ಬಾಲಕಿಯರು ವಿವಾಹವಾಗಿರುವುದಾಗಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾಳೆ. 

ಬಾಲ್ಯ ವಿವಾಹ, ಇದರಿಂದಾಗುವ ಗರ್ಭಿಣಿಯರ ಸಂಖ್ಯೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ  ಪಡೆಯಲು ಟಾಸ್ಕ್ ಫೋರ್ಸ್ ವೊಂದನ್ನು ನೇಮಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ವಿಚಾರದ ಬಗ್ಗೆ ಗಮನ ಹರಿಸಿರುವುದಾಗಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಆಂಟೋನಿ ಸೆಬಾಸ್ಟಿಯಾನ್ ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ ತಮ್ಮ ಊರಿನ ಅನೇಕ ಬಾಲ್ಯ ವಿವಾಹ ಪ್ರಕರಣಗಳ ಬಗ್ಗೆ ಗದಗ ಜಿಲ್ಲೆಯ ಕಾಡಕೊಳ್ ಗ್ರಾಮದ 10 ನೇ ತರಗತಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಬಡತನ, ನಿರ್ಲಕ್ಷ್ಯ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಸ್ವದೇಶಿ ಬುಡಕಟ್ಟು ಪದ್ಧತಿ, ಸಂಸ್ಕೃತಿ, ಶಿಕ್ಷಣ, ಪೌಷ್ಠಿಕಾಂಶ ಕೊರತೆ ಮತ್ತು ಶಾಲೆಯಿಂದ ಹೊರಗುಳಿದಿರುವುದು ಮತ್ತಿತರ ಅನೇಕ ಸಾಮಾಜಿಕ ಸಮಸ್ಯೆಗಳು ಬಾಲ್ಯ ವಿವಾಹಕ್ಕೆ ಕಾರಣವಾಗಿದೆ ಎಂದು ಆಂಟೋನಿ ಹೇಳಿದ್ದಾರೆ.

ಶೌಚಾಲಯ ಕೊರತೆಯಿಂದ ಅನೇಕ ಬಾಲಕಿರು ಶಾಲೆ ಬಿಟ್ಟಿದ್ದಾರೆ. ಇದು ಗಂಭೀರ ವಿಷಯವಾಗಿದೆ.ವಿದ್ಯಾರ್ಥಿಗಳಿಗೆ ಶೌಚೌಲಯ ಕೊರತೆಯಿಂದಾಗಿ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ವರ್ತಿಸಿದ್ದ ಸರ್ಕಾರಿ ಶಾಲೆಯೊಂದರ ಹೆಡ್ ಮಾಸ್ಟರ್ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆ ಸೆಕ್ಷನ್ 75ರ ಅನ್ವಯ ದೂರು ದಾಖಲಿಸಿಕೊಳ್ಳುವಂತೆ ಎಸ್ಪಿಗೆ ಕೆಎಸ್ ಸಿಪಿಆರ್ ಸಿ ನಿರ್ದೇಶಿಸಿದೆ ಎಂದು ಅವರು ತಿಳಿಸಿದರು. 

ಪ್ರಸ್ತುತ ಉತ್ತರ ಕರ್ನಾಟಕ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬಾಲ್ಯ ವಿವಾಹಗಳು ನಡೆಯುತ್ತಿವೆ. ಸಂಪ್ರದಾಯದ ಪ್ರಕಾರ ಋತುಮತಿಯಾದ ನಂತರ ನಂತರ ಅನೇಕ ಅಪ್ರಾಪ್ತ ಹುಡುಗಿಯರಿಗೆ ಮದುವೆ ಮಾಡಲಾಗುತ್ತಿದೆ. ಕಾನೂನು ಮೂಲಕ ಬಾಲ್ಯ ವಿವಾಹ ತಡೆಗಟ್ಟಬೇಕಾಗಿದೆ. ಕುಟುಂಬಸ್ಥರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು. 

ಈ ಮಧ್ಯೆ ಮಹಿಳೆಯರಿಗೆ ಮದುವೆ ವಯಸ್ಸಿನ ಮಿತಿಯನ್ನು 21ಕ್ಕೆ ಹೆಚ್ಚಿಸಬೇಕು ಎಂದು ' ಯಂಗ್ ವಾಯ್ಸಸ್'  ಸಂಸದರಿಗೆ ಬರೆದಿರುವ ಪತ್ರಕ್ಕೆ 15 ರಾಜ್ಯಗಳ 2,500 ಯುವ ಜನಾಂಗ, ದೇಶಾದ್ಯಂತ 96 ನಾಗರಿಕ ಸಮಾಜ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com