ಸುವರ್ಣ ವಿಧಾನಸೌಧ ಪ್ರವೇಶಕ್ಕೆ ಮಾಧ್ಯಮದವರಿಗೆ ನಿರ್ಬಂಧ: ಎಚ್.ಡಿ. ಕುಮಾರಸ್ವಾಮಿ ಆಕ್ರೋಶ, ಸ್ಪೀಕರ್ ಕಾಗೇರಿ ಸಂಧಾನ

ಸುವರ್ಣ ವಿಧಾನಸೌಧ ಪ್ರವೇಶಕ್ಕೆ ಮಾಧ್ಯಮದವರಿಗೆ ನಿರ್ಭಂಧ ಹೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ಘಟನೆ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ತೀವ್ರ ಕಿಡಿಕಾರಿದ್ದಾರೆ.
ಮಾಧ್ಯಮ ವರದಿಗಾರರ ಪ್ರತಿಭಟನೆ
ಮಾಧ್ಯಮ ವರದಿಗಾರರ ಪ್ರತಿಭಟನೆ

ಬೆಳಗಾವಿ: ಸುವರ್ಣ ವಿಧಾನಸೌಧ ಪ್ರವೇಶಕ್ಕೆ ಮಾಧ್ಯಮದವರಿಗೆ ನಿರ್ಭಂಧ ಹೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ಘಟನೆ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ತೀವ್ರ ಕಿಡಿಕಾರಿದ್ದಾರೆ.

ದೃಶ್ಯ ಮಾಧ್ಯಮದ ಪತ್ರಕರ್ತರನ್ನು ವಿಧಾನಸೌಧದ ಒಳಗಡೆಗೆ ಹೋಗದಂತೆ ತಡೆದು ನಿಲ್ಲಿಸಿದ ಘಟನೆ ನಡೆಯಿತು. ಎಂದಿನಂತೆ ಇಂದು ಬೆಳಗ್ಗೆ ಟಿವಿ ಮಾಧ್ಯಮದವರು ಒಳಪ್ರವೇಶಿಸಲು ಯತ್ನಿಸಿದಾಗ ಅವರನ್ನು  ಪೊಲೀಸರು ತಡೆದರು. ಇದರಿಂದಾಗಿ ಮಾದ್ಯಮದವರು ವಿಧಾನಸೌಧದ ಹೊರಗಡೆಯೇ ಉಳಿಯುವಂತ ಪರಿಸ್ಥಿತಿ ಎದುರಾಯಿತು.

ಸುವರ್ಣ ಸೌಧದಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ ಎಂದು ಹೇಳಲಾಗಿದೆ. 

ಮಾಧ್ಯಮಗಳ ಪ್ರತಿಭಟನೆ, ಸ್ಪೀಕರ್ ಕಾಗೇರಿ ಸಂಧಾನ
ಇನ್ನು ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ಟಿವಿ  ಮಾಧ್ಯಮಗಳ ವರದಿಗಾರರು,  ಕ್ಯಾಮೆರಾಮೆನ್‌ ಗಳು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ಬಳಿಕ ಟಿವಿ ಮಾಧ್ಯಮದವರಿಗೆ ಸೌಧದೊಳಗೆ  ಪ್ರವೇಶ ನೀಡುವಂತೆ ಸ್ಪೀಕರ್‌ ಕಾಗೇರಿ ಅವರು ಸೂಚನೆ ನೀಡಿದರು. ಈ ಬಳಿಕ ಮಾಧ್ಯಮದವರಿಗೆ ಪ್ರವೇಶ ನೀಡಲಾಗಿದೆ.

ಸುವರ್ಣ ವಿಧಾನಸೌಧದ ಒಳಗೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧದ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ  ಸ್ಪೀಕರ್‌ ಸ್ಥಳಕ್ಕೆ ಭೇಟಿ ನೀಡಿದರು.  ಮಾಧ್ಯಮಗಳಿಗೆ ಸುವರ್ಣ ವಿಧಾನಸೌಧದ ಪ್ರವೇಶ ನಿರ್ಭಂದಕ್ಕೆ ನಾನು ಯಾವುದೇ ಆದೇಶ ನೀಡಿಲ್ಲ ಎಂದರು. ಈ ಮದ್ಯೆ ನಿರ್ಬಂಧದ ವಿಚಾರವಾಗಿ ಸಂದೇಶವನ್ನು ಸಭಾದ್ಯಕ್ಷರಿಗೆ ತೋರಿಸುತ್ತಿದ್ದಂತೆ ಈ ಸಂದೇಶದ ಬಗ್ಗೆ ನಾನು ಪರಿಶೀಲಿಸುತ್ತೇನೆ ಎಂದ ಅವರು ಮಾಧ್ಯಮದವರು ಎಂದಿನಂತೆ ತಮ್ಮ ಚಟುವಟಿಕೆಗಳನ್ನ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದರು.

ಎಚ್ ಡಿ ಕುಮಾರಸ್ವಾಮಿ ಆಕ್ರೋಶ 
ಮಾಧ್ಯಮ‌ನಿರ್ಬಂಧದ ಬಗ್ಗೆ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿರುವವರು ಸಂವಿಧಾನದ ಒಂದು ಕಾಲನ್ನೇ ಮುರಿಯುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ʼವಿಷಯಾಂತರʼ ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ.

ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ʼಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನʼ ಮಾಡಲಾಗುತ್ತಿದೆ.ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ.

ಈ ಮಧ್ಯೆ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದರೆ, ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ ಎಂದು ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com