ಕೋಲಾರ ವೈದ್ಯಕೀಯ ಕಾಲೇಜಿನಲ್ಲಿ 33, ಕೊಡಗಿನ ಶಾಲೆಯಲ್ಲಿ 26 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢ

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಏರಿಳಿತ ಮುಂದುವರೆದಿರುವಂತೆಯೇ ಕೋವಿಡ್ ಕ್ಲಸ್ಟರ್ ಗಳ ಸಂಖ್ಯೆ ಕೂಡ ಏರತೊಡಗಿದ್ದು, ಕೋಲಾರ ವೈದ್ಯಕೀಯ ಕಾಲೇಜಿನಲ್ಲಿ 33, ಕೊಡಗಿನ ಶಾಲೆಯಲ್ಲಿ 26 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಏರಿಳಿತ ಮುಂದುವರೆದಿರುವಂತೆಯೇ ಕೋವಿಡ್ ಕ್ಲಸ್ಟರ್ ಗಳ ಸಂಖ್ಯೆ ಕೂಡ ಏರತೊಡಗಿದ್ದು, ಕೋಲಾರ ವೈದ್ಯಕೀಯ ಕಾಲೇಜಿನಲ್ಲಿ 33, ಕೊಡಗಿನ ಶಾಲೆಯಲ್ಲಿ 26 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕೋಲಾರದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ 33 ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದು, ಇವರ ಮಾದರಿಗಳನ್ನು ಜಿನೋಮಿಕ್ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಚರಣಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಕೋವಿಡ್ ಸೋಂಕಿತ ವಿದ್ಯಾರ್ಥಿಗಳು ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ, ಆದರೆ ಅವರ ಬೆಂಗಳೂರು ಪ್ರಯಾಣವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಪ್ರಕಾರ ಕಳೆದ 45 ದಿನಗಳಿಂದ ಆಂತರಿಕ ಪರೀಕ್ಷೆಗಳು ನಡೆಯುತ್ತಿದ್ದು, ಯಾವುದೇ ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಿಲ್ಲ ಎಂದು ಡಾ.ಚರಣಿ ತಿಳಿಸಿದ್ದಾರೆ. 

ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಸಂಪೂರ್ಣ ಬ್ಲಾಕ್ ಅನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದ್ದು, ಎಲ್ಲಾ ಸೋಂಕಿತ ವೈದ್ಯಕೀಯ ವಿದ್ಯಾರ್ಥಿಗಳನ್ನು ಆರ್‌ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಇಲ್ಲಿಯವರೆಗೆ, ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳ 1192 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಡಾ ಚರಣಿ ಹೇಳಿದರು.

ಮೂಲಗಳ ಪ್ರಕಾರ, ಸೋಂಕಿತ 33 ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ 32 ಮಹಿಳೆಯರು ಮತ್ತು ಒಬ್ಬ ಪುರುಷ ವಿದ್ಯಾರ್ಥಿಯಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸೊಂಕಿಗೆ ತುತ್ತಾದ ಮೊದಲ ಪ್ರಕರಣ ಡಿಸೆಂಬರ್ 17 ರಂದು ವರದಿಯಾಗಿತ್ತು. ಈ ಮೂಲಕ ಕೋಲಾರ ಜಿಲ್ಲೆಯಲ್ಲಿ 2ನೇ ಕೋವಿಡ್ ಕ್ಲಸ್ಟರ್ ಪತ್ತೆಯಾಗಿದ್ದು, ಈ ಹಿಂದೆ, ಕೆಜಿಎಫ್‌ನ ಖಾಸಗಿ ಸಂಸ್ಥೆಯೊಂದರ ನರ್ಸಿಂಗ್ ವಿದ್ಯಾರ್ಥಿಗಳು ಕೇರಳದಿಂದ ಕಾಲೇಜಿಗೆ ಹಿಂತಿರುಗಿದಾಗ ಸೋಂಕಿಗೆ ತುತ್ತಾಗಿದ್ದರು.

ಕೊಡಗಿನ ಶಾಲೆಯೊಂದರಲ್ಲಿ 26 ವಿದ್ಯಾರ್ಥಿಗಳಿಗೆ ಪಾಸಿಟಿವ್
ಕೋಲಾರದಂತೆಯೇ ಕೊಡಗಿನ ಸಂಸ್ಥೆಯೊಂದರಲ್ಲಿ ಒಟ್ಟು 26 ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಡ ವಸತಿ ಶಾಲೆಯ ವಿದ್ಯಾರ್ಥಿಗಳು. ಶಾಲಾ ಆಡಳಿತವು ಸುಮಾರು ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಕೋವಿಡ್-19 ಪರೀಕ್ಷೆಗಳನ್ನು ಮಾಡಲು ವ್ಯವಸ್ಥೆ ಮಾಡಿತ್ತು. ಶಾಲೆಯ ಒಟ್ಟು 387 ವಿದ್ಯಾರ್ಥಿಗಳು ತಮ್ಮ ಸ್ವ್ಯಾಬ್‌ಗಳನ್ನು ಪರೀಕ್ಷೆಗಳಿಗೆ ನೀಡಿದ್ದರು. ಈ ಪೈಕಿ 26 ಮಂದಿ ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. 

ಸೋಂಕಿತ ವಿದ್ಯಾರ್ಥಿಗಳು 5 ರಿಂದ 10 ನೇ ತರಗತಿಯ ನಡುವೆ ಓದುತ್ತಿದ್ದಾರೆ. ಶಾಲೆಯಲ್ಲಿ ಎಲ್ಲಾ 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಖಚಿತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com