ಮಾಜಿ‌ ಸಿಎಂ ದಿವಂಗತ ಧರಂ ಸಿಂಗ್ ಸಂಬಂಧಿ ಸಿದ್ದಾರ್ಥ್ ಕೊಲೆ ಪ್ರಕರಣ: ಆರೋಪಿ ಆತ್ಮಹತ್ಯೆ

ಮಾಜಿ‌ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ಸಂಬಂಧಿ ಸಿದ್ದಾರ್ಥ್ ದೇವೆಂದರ್ ಸಿಂಗ್ ಅವರ ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಭಾಗಿಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

Published: 02nd February 2021 12:49 PM  |   Last Updated: 02nd February 2021 12:57 PM   |  A+A-


Siddartha singh

ಕೊಲೆಯಾದ ಸಿದ್ದಾರ್ಥ್ ಸಿಂಗ್

Posted By : Shilpa D
Source : UNI

ಬೆಂಗಳೂರು: ಮಾಜಿ‌ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ಸಂಬಂಧಿ ಸಿದ್ದಾರ್ಥ್ ದೇವೆಂದರ್ ಸಿಂಗ್ ಅವರ ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಭಾಗಿಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ತಿರುಪತಿಯ ಕಾರ್ಲಗುಂಟದ ಚೆನ್ನಾರೆಡ್ಡಿ ಎಂಬವರ ಮಗ ಶ್ಯಾಂಸುಂದರ್ ರೆಡ್ಡಿ (28) ಆತ್ಮಹತ್ಯೆ ಯತ್ನಿಸಿ ಮೃತಪಟ್ಟ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಆರೋಪಿಯು ಬಿ.ಟೆಕ್ ವ್ಯಾಸಂಗ ಮಾಡಿದ್ದು 2014ರಿಂದ ಉದ್ಯೋಗಕ್ಕಾಗಿ ಚೆನ್ನೈ ಇನ್ನಿತರ ಕಡೆಗಳಲ್ಲಿ ಅಲೆದಾಟ ನಡೆಸಿ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ವಿನೋದ್ ಜೊತೆ ಕೆಲವು ದಿನಗಳ ಕಾಲ ವಾಸವಿದ್ದ. ವಿನೋದ್ ಸಹ ತಿರುಪತಿಯ ಕಾರ್ಲಗುಂಟ ನಿವಾಸಿಯಾಗಿದ್ದು, ವಾರದ ಹಿಂದೆ ವಿನೋದ್ ಮತ್ತು ಶ್ಯಾಂಸುಂದರ್ ರೆಡ್ಡಿ ಇಬ್ಬರೂ ತಿರುಪತಿಗೆ ಬಂದಿದ್ದಾರೆ. ಆದರೆ ಕಳೆದ ಜ. 19 ರಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಹತ್ಯೆಯಾಗಿದ್ದು, ಆ ಕೊಲೆ ಪ್ರಕರಣದಲ್ಲಿ ಇವರ ಕೈವಾಡವಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕೊಲೆ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ಬರುತ್ತಾರೆಂದು ಹೆದರಿ ವಿನೋದ್ ಮತ್ತು ಶ್ಯಾಂಸುಂದರ್ ಆತ್ಮಹತ್ಯೆಗೆ ಶರಣಾಗಲು ತೀರ್ಮಾನಿಸಿ ನಾಲ್ಕು ದಿನಗಳ ಹಿಂದೆ ತನ್ನ ಶರ್ಟ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಿರುಪತಿ ಶ್ರೀನಿವಾಸಂ ಹಿಂಬದಿಯಿರುವ ತಾಳ್ಲಪಾಕ ಕೆರೆಯ ಬಳಿಯ ಮುಳ್ಳಿನ ಕಂಟಿಯಲ್ಲಿ ಶ್ಯಾಂಸುಂದರ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಿನ್ನೆ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಸ್ ಐ ಇಮ್ರಾನ್ ಪಾಷಾ ತಂಡ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ.

ತಿರುಪತಿ-ರೇಣಿಗುಂಟ ಮಾರ್ಗ ಚಲಿಸುತ್ತಿದ್ದ ರೈಲಿನಡಿ ಬಿದ್ದು ಮತ್ತೊಬ್ಬ ಆರೋಪಿ ವಿನೋದ್ ಆತ್ಮಹತ್ಯೆಗೆ ಯತ್ನಿಸಿದ್ದು ಆದರೆ ರೈಲು ವೇಗವಾಗಿರುವುದರಿಂದ ಡಿಕ್ಕಿಯ ರಭಸಕ್ಕೆ ವಿನೋದ್ ಪಕ್ಕಕ್ಕೆ ಬಿದ್ದು ಕೈಗಳು ಮತ್ತು ಕಾಲುಗಳಿಗೆ ಗಾಯವಾಗಿದ್ದು ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದನನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಮೇರೆಗೆ ನೆಲ್ಲೂರಿನ ನಲ್ಲಮಲ್ಲ ಅರಣ್ಯಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ ಮಾಡಿದ್ದಾರೆ. ಸ್ಥಳೀಯ ತಹಶೀಲ್ದಾರ್ ಹಾಗೂ ವೈದ್ಯರ ಅನುಮತಿ ಪಡೆದ ಬಳಿಕ ಹೂಳಿರುವ ಶವ ಹೊರತೆಗೆದಿದ್ದಾರೆ.

ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿದ್ದು, ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ‌. ಕೊಲೆ ಹಿಂದೆ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವೈಷಮ್ಯ ಸೇರಿದಂತೆ ಎಲ್ಲ ರೀತಿಯ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ‌‌.

ಅಮೆರಿಕದಲ್ಲಿ ವ್ಯಾಸಂಗ ಮಾಡಿದ್ದ ಸಿದ್ದಾರ್ಥ್ ಅಮೃತಹಳ್ಳಿಯ ದಾಸರಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ  ವಾಸವಾಗಿದ್ದರು. ಕಳೆದ ಜ.19 ರಂದು ತಂದೆ ದೇವೇಂದರ್ ಸಿಂಗ್ ಕೊನೆಯ ಬಾರಿ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ ವಾಟ್ಸ್ಆ್ಯಪ್ ಮಾಡಿದ್ದರು.

ಬಳಿಕ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು‌. ಎರಡು ಮೂರು ದಿನಗಳ ಕಳೆದರೂ ಮಗ ಅಮೆರಿಕಕ್ಕೆ ಹೋಗದೆ, ಮನೆಗೂ ಬಾರದೇ ನಾಪತ್ತೆಯಾಗಿರುವುದನ್ನು ಕಂಡ ಪೋಷಕರು ಆತಂಕಗೊಂಡು ಜ‌.25ರಂದು ಅಮೃತಹಳ್ಳಿ‌‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕೊಲೆ ಯಾವ ಕಾರಣಕ್ಕಾಗಿ ಮಾಡಿದ್ದಾರೆ, ವಶಕ್ಕೆ ಪಡೆದುಕೊಂಡ ಆರೋಪಿ ಪಾತ್ರ ಹಾಗೂ ಯಾವ ರೀತಿಯಲ್ಲಿ ಸಿದ್ದಾರ್ಥ್ ನನ್ನು ಹತ್ಯೆಗೈಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp