'ಪ್ರಾದೇಶಿಕ ಸಮಗ್ರತೆ ರಕ್ಷಿಸಲು, ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಭಾರತ ಸಿದ್ಧವಿದೆ': ಚೀನಾಗೆ ರಾಜನಾಥ್ ಸಿಂಗ್ ಸಂದೇಶ
ಗಡಿಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತ ಜಾಗರೂಕವಾಗಿದೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಸಹ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Published: 03rd February 2021 01:55 PM | Last Updated: 03rd February 2021 02:17 PM | A+A A-

ಏರೋ ಇಂಡಿಯಾ-2021 ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಿಡಿಎಸ್ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬೆಂಗಳೂರು: ಗಡಿಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತ ಜಾಗರೂಕವಾಗಿದೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಸಹ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭಗೊಂಡಿರುವ ವೈಮಾನಿಕ ಪ್ರದರ್ಶನದ ಉದ್ಘಾಟನೆ ಬಳಿಕ ಮಾತನಾಡಿ, ಚೀನಾದೊಂದಿಗೆ ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಮಿಲಿಟರಿ ನಿಯೋಜನೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದರು.
ಗಡಿಭಾಗದಲ್ಲಿ ಯಥಾಸ್ಥಿತಿ ಬದಲಾವಣೆಗೆ ಚೀನಾ ಪ್ರಯತ್ನಿಸುತ್ತಿರುವ ಪ್ರಯತ್ನ ದುರದೃಷ್ಟಕರ, ಇದಕ್ಕಾಗಿ ಗಡಿಯಲ್ಲಿ ನಮ್ಮ ಸೈನ್ಯವನ್ನು ನಿಯೋಜಿಸಬೇಕಾಗಿ ಬಂತು. ನಮ್ಮ ಪ್ರಾಂತೀಯ ಸಮಗ್ರತೆ ಮತ್ತು ಭಾರತೀಯರನ್ನು ಕೆಣಕಲು ಬಂದರೆ ಅದನ್ನು ಎದುರಿಸಲು ನಿಗ್ರಹಿಸಲು ಭಾರತ ಜಾಗೃತವಾಗಿದೆ ಎಂದು ರಾಜನಾಥ್ ಸಿಂಗ್ ಚೀನಾಕ್ಕೆ ತಿರುಗೇಟು ನೀಡಿದರು.
ಪೂರ್ವ ಲಡಾಕ್ ನಲ್ಲಿ ಕಳೆದ ವರ್ಷ ಮೇ 5ರಿಂದ ಭಾರತ-ಚೀನಾ ಮಿಲಿಟರಿಗಳು ನಿಯೋಜನೆಯಾಗಿವೆ. ಸೇನಾ ಸಂಘರ್ಷವನ್ನು ಬಗೆಹರಿಸಲು ಎರಡೂ ದೇಶಗಳು ಹಲವು ಸುತ್ತಿನ ಮಿಲಿಟರಿ ಮತ್ತು ರಾಯಭಾರಿ ಮಟ್ಟದ ಮಾತುಕತೆಗಳನ್ನು ನಡೆಸಿವೆ. ಆದರೆ ಅದರಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ.
130 ಬಿಲಿಯನ್ ಡಾಲರ್: ಮುಂದಿನ ಏಳೆಂಟು ವರ್ಷಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ದೊಡ್ಡ ಮತ್ತು ಸಂಕೀರ್ಣ ಮಟ್ಟದಲ್ಲಿ ದೇಶೀಯ ಉತ್ಪಾದನೆಗೆ ಒತ್ತು ನೀಡಿ ರಕ್ಷಣಾ ವಲಯದ ಆಧುನೀಕರಣಕ್ಕೆ ಸುಮಾರು 130 ಶತಕೋಟಿ ಡಾಲರ್ ನಷ್ಟು ವೆಚ್ಚ ಮಾಡಲು ಭಾರತ ಯೋಚಿಸುತ್ತಿದೆ.
ರಫ್ತು, ವಿದೇಶಿ ನೇರ ಹೂಡಿಕೆಗಳನ್ನು ಸರಿದೂಗಿಸಲು 2014ರ ನಂತರ ಕೇಂದ್ರ ಸರ್ಕಾರ ಹಲವು ಸುಧಾರಣೆಗಳನ್ನು ತಂದಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಮತ್ತು ಹೆಚ್ಚೆಚ್ಚು ರಫ್ತಿನ ಗುರಿಯನ್ನು ಈಡೇರಿಸಲು ರಕ್ಷಣಾ ಉತ್ಪನ್ನ, ವಾಯು ಅಂತರಿಕ್ಷ ಮತ್ತು ರಕ್ಷಣಾ ಸರಕು ಮತ್ತು ಸೇವಾ ವಲಯದಲ್ಲಿ 2024ರಲ್ಲಿ 35 ಸಾವಿರ ಕೋಟಿ ರೂಪಾಯಿಗಳಷ್ಟು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಮುಂದಿನ ಏಳೆಂಟು ವರ್ಷಗಳಲ್ಲಿ ರಕ್ಷಣಾ ವಲಯದ ಆಧುನೀಕರಣಕ್ಕೆ 130 ಶತಕೋಟಿ ಡಾಲರ್ ನಷ್ಟು ಖರ್ಚು ಮಾಡುವ ಯೋಜನೆ ಭಾರತದ ಮುಂದೆ ಇದೆ ಎಂದು ಕೂಡ ಸಿಂಗ್ ಹೇಳಿದರು.
ಹಲವು ಸ್ನೇಹಿ ರಾಷ್ಟ್ರಗಳಂತೆ ಭಾರತ ಕೂಡ ಹಲವು ಕಡೆಗಳಿಂದ ಬೆದರಿಕೆ ಮತ್ತು ಸವಾಲುಗಳನ್ನು ಎದುರಿಸುತ್ತದೆ. ಕೆಲವು ದೇಶಗಳ ಬೆಂಬಲದಿಂದ ಬೆಳೆದಿರುವ ಭಯೋತ್ಪಾದನೆ ಇಂದು ಜಾಗತಿಕ ಮಟ್ಟದಲ್ಲಿ ಸವಾಲಾಗಿದೆ. ದೇಶದ ಭದ್ರತೆಯನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.