ವಿಟಿಯು ನಲ್ಲಿ ಕೋಟ್ಯಂತರ ರೂಪಾಯಿ ಹಗರಣ: ಆರ್ ಟಿಐ ಮಾಹಿತಿಯಿಂದ ಬಯಲು 

ತಾಂತ್ರಿಕ ಶಿಕ್ಷಣದ ಕೇಂದ್ರವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿರುವುದು ಆರ್ ಟಿಐ ನಿಂದ ಬಹಿರಂಗಗೊಂಡಿದೆ. 

Published: 04th February 2021 01:20 PM  |   Last Updated: 04th February 2021 01:20 PM   |  A+A-


VTU

ಸಾಂದರ್ಭಿಕ ಚಿತ್ರ

Posted By : Srinivas Rao BV
Source : The New Indian Express

ಬೆಂಗಳೂರು: ತಾಂತ್ರಿಕ ಶಿಕ್ಷಣದ ಕೇಂದ್ರವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿರುವುದು ಆರ್ ಟಿಐ ನಿಂದ ಬಹಿರಂಗಗೊಂಡಿದೆ. 

ರಾಜ್ಯಾದ್ಯಂಟ 200 ಇಂಜಿನಿಯರಿಂಗ್ ಕಾಲೇಜುಗಳನ್ನು ನಿರ್ವಹಣೆ ಮಾಡುವ ವಿಟಿಯುನಲ್ಲಿ ಹಗರಣ ನಡೆದಿದ್ದು, ಕೋಟ್ಯಾಂತರ ರೂಪಾಯಿ ಮೊತ್ತದ ಅನುಮಾನಾಸ್ಪದ ಬ್ಯಾಂಕ್ ವಹಿವಾಟುಗಳು ನಡೆದಿರುವುದು ಹಾಗೂ ಆ ಬಗ್ಗೆ ವಿವಿಯ 2017-18 ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿರುವುದು ಅಡ್ವೊಕೇಟ್ ಸುರೇಂದ್ರ ಉಗರೆ ಅವರ ಆರ್ ಟಿಐ ನಿಂದ ಬಹಿರಂಗಗೊಂಡಿದೆ. 

ವಿವಿಯ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣ ವಿತ್ ಡ್ರಾ ( withdraw) ಮಾಡಿ ಅದನ್ನು ಕೆಲಕಾಲದ ಬಳಿಕ ವಾಪಸ್ ವಿವಿ ಖಾತೆಗೇ ಜಮೆ ಮಾಡಿರುವುದು ಕಂಡುಬಂದಿದೆ. ಪರಿಣಾಮ ಬಡ್ಡಿ ಹಣ ನಷ್ಟವಾಗಿದೆ. 2017-18 ನೇ ಸಾಲಿನಲ್ಲಿ ವಿವಿ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಒಟ್ಟಾರೆ 59.60 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆದಿರುವುದು ಲೆಕ್ಕಪರಿಶೋಧನಾ ವರದಿಯಲ್ಲಿ ದಾಖಲಾಗಿದೆ. 

ಈ ಮೊತ್ತವನ್ನು ವಿಟಿಯು ರಿಜಿಸ್ಟಾರ್ (ಮೌಲ್ಯಮಾಪನ) ಗೆ ಮುಂಗಡದ ರೂಪದಲ್ಲಿ ಎರಡು ಪ್ರತ್ಯೇಕ ವಹಿವಾಟುಗಳಲ್ಲಿ ವರ್ಗಾವಣೆ ಮಾಡಲಾಗಿತ್ತು. ಅಂದರೆ ಮಾ.21, 2017 ರಂದು 38 ಕೋಟಿ ರೂಪಾಯಿ, ಹಾಗೂ ಮಾ.31, 2017 ರಂದು 21.60 ಕೋಟಿ ರೂಪಾಯಿಗಳನ್ನು ಡಿ.ಡಿ ಮೂಲಕ ಎಸ್ ಸಿಪಿ/ ಟಿಎಸ್ ಪಿ ಸೆಲ್ ಖಾತೆಯಿಂದ ವರ್ಗಾವಣೆ ಮಾಡಲಾಗಿತ್ತು. ಇದೇ ಮೊತ್ತವನ್ನು ಒಂದು ವರ್ಷದ ಬಳಿಕ 2018 ರಲ್ಲಿ ಮಾ.31 ರಂದು ವಿವಿ ಖಾತೆಗೆ ಜಮೆ ಮಾಡಲಾಗಿದೆ.
 
ಈ ಅನುಮಾನಾಸ್ಪದ ವಹಿವಾಟಿನ ಬಗ್ಗೆ ಲೆಕ್ಕಪರಿಶೋಧನ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಸಂಬಂಧಪಟ್ಟ ವಿಟಿಯು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಒತ್ತಾಯಿಸಲಾಗಿದೆ. 

ವಿಟಿಯು ಕಾಯ್ದೆ 1994 ಸೆಕ್ಷನ್ 23(6) ಚಾಪ್ಟರ್ 7 ರ ಪ್ರಕಾರ, ವಿವಿ ಆದಾಯದ ಹನ ಹಾಗೂ ನಿಧಿಯನ್ನು ವಿವಿಯ ಅಭಿವೃದ್ಧಿಕಾರ್ಯಗಳಿಗಷ್ಟೇ ವಿನಿಯೋಗಿಸಬೇಕು, ಆದರೆ ಈ ಮೊತ್ತವನ್ನು ಬೇರೆಡೆಗೆ ವರ್ಗಾಯಿಸಿ ಅದನ್ನು ಒಂದು ವರ್ಷದ ಬಳಿಕ ವಾಪಸ್ ಜಮೆ ಮಾಡಲಾಗಿದೆ. ಇದರಿಂದ ವಿವಿ ಕಾಯ್ದೆಯ ಉಲ್ಲಂಘನೆಯಾಗಿರುವುದನ್ನು, ಹಣ ದುರ್ಬಳಕೆಯಾಗಿರುವುದನ್ನು ಸಮಿತಿ ಗಮನಿಸಿದೆ ಎಂದು ಆಡಿಟ್ ವರದಿಯಲ್ಲಿ ಉಲ್ಲೇಖಗೊಂಡಿದೆ. 

2016-17 ಹಾಗೂ 2017-18 ರಲ್ಲಿ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ಅಥವಾ ಸಂಬಂಧಪಟ್ಟವರ ಗಮನಕ್ಕೆ ಬಾರದೇ 109.60 ಕೋಟಿ ರೂಪಾಯಿಗಳನ್ನು ವಿಟಿಯು ಖಾತೆಯಿಂದ ಹಣ ವರ್ಗಾವಣೆಯಾಗಿದೆ. 

ಎರಡನೇ ಪ್ರಕರಣದಲ್ಲಿ ಮಾ.21, 2017 ರಂದು 12 ಕೋಟಿ ರೂಪಾಯಿಗಳನ್ನು ವಿಟಿಯು ಆರ್ಥಿಕ ಸಮಿತಿಯ ಅನುಮತಿ ಪಡೆಯದೇ ದಾವಣಗೆರೆಯ ಯುಬಿಡಿಟಿಸಿಇ ಪ್ರಾಂಶುಪಾಲರ ಖಾತೆಗೆ ವಿವಿ ಖಾತೆಯಿಂದ ಹಣ ವರ್ಗಾವಣೆಯಾಗಿದೆ, 

ಮೂರನೇ ಪ್ರಕರಣದಲ್ಲಿ ವಿವಿ ಖಾತೆಯಿಂದ 2017 ರ ಏ.24 ರಂದು 10 ಕೋಟಿ ರೂಪಾಯಿಗಳನ್ನು ತೆಗೆಯಲಾಗಿದೆ. ಈ ವಹಿವಾಟಿನ ವಿವರ ಲಭ್ಯವಿಲ್ಲ ಎನ್ನುತ್ತಿದೆ ಲೆಕ್ಕಪರಿಶೋಧಕರ ವರದಿ

4 ನೇ ಪ್ರಕರಣದಲ್ಲಿ ವಿಟಿಯು ನ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಅಕಾಡೆಮಿಯ ಖಾತೆಯಿಂದ 24 ಕೋಟಿ ಹಾಗೂ 1.11 ಕೋಟಿ ರೂಪಾಯಿಗಳನ್ನು ತೆಗೆಯಲಾಗಿದೆ ಹಾಗೂ ಕೆಲವು ಕಾಲದ ನಂತರ ಮರಳಿ ಜಮೆ ಮಾಡಲಾಗಿದೆ ಇದಕ್ಕೆ ಅನುಮತಿ ಪಡೆದಿರಲಿಲ್ಲ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ. 

ಈ ವಹಿವಾಟುಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಯಾವುದೇ ಕಾರಣ ಅಥವಾ ದಾಖಲೆಗಳು ಇಲ್ಲ. ಇದರಿಂದಾಗಿ ವಿವಿಗೆ ಈ ಹಣದಿಂದ ಬರುತ್ತಿದ್ದ ಬಡ್ಡಿಯ ಮೊತ್ತ ನಷ್ಟವಾಗಿದೆ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೆಕ್ಕಪರಿಶೋಧಕರ ವರದಿ ಆಗ್ರಹಿಸಿದೆ. ತಮಗೆ ಲಭ್ಯವಾಗಿರುವ ಅವ್ಯವಹಾರದ ದಾಖಲೆಗನ್ನು ಶೀಘ್ರವೇ ಲೋಕಾಯುಕ್ತರಿಗೆ ತಲುಪಿಸುವುದಾಗಿ ಅಡ್ವೊಕೇಟ್ ಸುರೇಂದ್ರ ಉಗರೆ ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp