ವಿಶ್ವ ಕ್ಯಾನ್ಸರ್ ದಿನಾಚರಣೆ: 'ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸುವ ಸುವರ್ಣಾವಕಾಶವನ್ನು ಕೇಂದ್ರ ಕಳೆದುಕೊಂಡಿದೆ'!
ಕೇಂದ್ರ ಬಜೆಟ್ ನಲ್ಲಿ ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ಕಳೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ತಂಬಾಕು ಹೊಗೆರಹಿತ ಸ್ಥಳಗಳನ್ನಾಗಿ ಮಾಡಬೇಕು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.
Published: 04th February 2021 04:26 PM | Last Updated: 04th February 2021 05:04 PM | A+A A-

ವಿಶ್ವ ಕ್ಯಾನ್ಸರ್ ದಿನಾಚರಣೆ
ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ಕಳೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ತಂಬಾಕು ಹೊಗೆರಹಿತ ಸ್ಥಳಗಳನ್ನಾಗಿ ಮಾಡಬೇಕು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.
ಪ್ರತಿ ವರ್ಷದ ಫೆಬ್ರವರಿ 4 ರಂದು ಆಚರಿಸಲಾಗುವ ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ತಂಬಾಕು ಹೊಗೆರಹಿತ ಸ್ಥಳಗಳನ್ನಾಗಿ ಮಾಡಬೇಕು. ಹೋಟೆಲ್, ಬಾರ್, ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳನ್ನು ನಿಯಮಾನುಸಾರ ತೆರೆಯಬೇಕು, ಇಲ್ಲವೇ ಅವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಧೂಮಪಾನ ಮಾಡದವರನ್ನು ಇಚ್ಛೆಯಿಲ್ಲದ 'ಪರೋಕ್ಷ ಧೂಮಪಾನ'ದಿಂದ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪರೋಕ್ಷ ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವ ಅಪಾಯ ಶೇಕಡಾ 30 ರಷ್ಟು ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಬೆಂಗಳೂರಿನ ರಾಷ್ಟ್ರೀಯ ರೋಗ ಮಾಹಿತಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎನ್ ಸಿಡಿಐಆರ್) ಬಿಡುಗಡೆ ಮಾಡಿರುವ ರಾಷ್ಟ್ರೀಯ ಕ್ಯಾನ್ಸರ್ ನೋಂದಾವಣಿ ಕಾರ್ಯಕ್ರಮ ವರದಿ 2020ಯ ಪ್ರಕಾರ 2020ರಲ್ಲಿ 13.9 ಲಕ್ಷದಷ್ಟಿದ್ದ ಕ್ಯಾನ್ಸರ್ ಪ್ರಕರಣಗಳು 2025ರ ವೇಳೆಗೆ 15.7 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವಯಸ್ಕರಲ್ಲಿ ತಂಬಾಕು ಬಳಕೆಗೆ ಸಂಬಂಧಿಸಿದ ಜಾಗತಿಕ ಸಮೀಕ್ಷೆ ಗ್ಯಾಟ್ಸ್-2 (GATS-2) ಪ್ರಕಾರ, ಕರ್ನಾಟಕದ ವಯಸ್ಕರಲ್ಲಿ ಶೇಕಡಾ 14ರಷ್ಟು ಮಂದಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ತಮ್ಮನ್ನು ಧೂಮಪಾನಕ್ಕೆ ಒಡ್ಡಿಕೊಂಡಿದ್ದಾರೆ ( ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್).
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮದ ಪ್ರಕಾರ, ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್ ಮತ್ತು ಕ್ಲಬ್ ಗಳು ಸಂಪೂರ್ಣ ತಂಬಾಕು ಹೊಗೆರಹಿತವಾಗಿರಬೇಕು. 30ಕ್ಕೂ ಹೆಚ್ಚು ಆಸನಗಳನ್ನು ಹೊಂದಿರುವ ಸ್ಥಳಗಳು ಬಿಬಿಎಂಪಿಯಿಂದ ನಿರಪೇಕ್ಷಣಾ ಪತ್ರವನ್ನು ಪಡೆದು ಗೊತ್ತುಪಡಿಸಿದ ಧೂಮಪಾನ ಪ್ರದೇಶವನ್ನು ಸ್ಥಾಪಿಸಬಹುದು. ನಿಯಮದ ಪ್ರಕಾರ, ಗೊತ್ತುಪಡಿಸಿದ ಧೂಮಪಾನ ಪ್ರದೇಶವು ಆವರಣದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಇರಬಾರದು ಮತ್ತು ಅದಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿರಬೇಕು. ಆವರಣದಿಂದ ಗೊತ್ತುಪಡಿಸಿದ ಧೂಮಪಾನ ಪ್ರದೇಶವನ್ನು ಪ್ರತ್ಯೇಕಿಸಬೇಕು ಮತ್ತು ಹೊಗೆಯನ್ನು ಹೊರಹಾಕುವ ನಿಷ್ಕಾಸ ವ್ಯವಸ್ಥೆ ಹೊಂದಿರಬೇಕು. ಇದಲ್ಲದೆ ಧೂಮಪಾನ ಪ್ರದೇಶದಲ್ಲಿ ಯಾವುದೇ ಸೇವೆಯನ್ನು ಒದಗಿಸಬಾರದು.
"ಹೋಟೆಲ್, ಪಬ್, ಬಾರ್ ಮುಂತಾದ ಸ್ಥಳಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಧೂಮಪಾನಕ್ಕೆ ಅವಕಾಶ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 20,000ಕ್ಕೂ ಅಧಿಕ ರೆಸ್ಟೋರೆಂಟ್ ಗಳಿದ್ದು, ಇವುಗಳಲ್ಲಿ ಸುಮಾರು ಮೂರು ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಸಂಖ್ಯೆಗೆ ಹೋಲಿಸಿದರೆ ನಿಯಮಾನುಸಾರ ಗೊತ್ತುಪಡಿಸಿದ ಧೂಮಪಾನ ಪ್ರದೇಶವನ್ನು ಸ್ಥಾಪಿಸಿದ ಯಾವುದೇ ವ್ಯಾಪಾರ ಸ್ಥಳ ಇಲ್ಲ ಎನ್ನಬಹುದು. ಧೂಮಪಾನ ಮಾಡದವರು, ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷ ಧೂಮಪಾನದಿಂದ ನೇರವಾಗಿ ಬಾಧಿತರಾಗುತ್ತಿದ್ದಾರೆ. ಗೊತ್ತುಪಡಿಸಿದ ಧೂಮಪಾನ ಪ್ರದೇಶಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸುವ ಮೂಲಕ ಇದಕ್ಕೆ ಕೊನೆ ಹಾಡಬೇಕು. ಗೊತ್ತುಪಡಿಸಿದ ಧೂಮಪಾನ ಪ್ರದೇಶಕ್ಕೆ ಸಂಬಂಧಿಸಿದ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಒತ್ತಾಯಿಸಿ ತಂಬಾಕು ಮುಕ್ತ ಕರ್ನಾಟಕ ಸಹಯೋಗ ಬಿಬಿಎಂಪಿ ಆಯುಕ್ತ ಶ್ರೀ ಮಂಜುನಾಥ್ ಪ್ರಸಾದ್ ಅವರಿಗೆ ಫೆಬ್ರವರಿ 3ರಂದು ಪತ್ರ ಬರೆದಿದೆ" ಎಂದು ತಂಬಾಕು ಮುಕ್ತ ಕರ್ನಾಟಕ ಸಹಯೋಗದ ಕಾರ್ಯದರ್ಶಿ ಶ್ರೀ ಎಸ್ ಜೆ ಚಂದರ್ ಹೇಳಿದರು.
“ತಂಬಾಕು ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಪ್ರತಿವರ್ಷ 1,82,000 ಕೋಟಿ ರೂಪಾಯಿಗಳು ವ್ಯಯವಾಗುತ್ತಿದ್ದು, ಇದು ಭಾರತದ ಜಿಡಿಪಿಯ ಶೇಕಡಾ 1.8% ರಷ್ಟಾಗಿದೆ. ಪರೋಕ್ಷ ಧೂಮಪಾನವು ನೇರ ಧೂಮಪಾನಕ್ಕೆ ಸಮವಾಗಿದ್ದು, ಧೂಮಪಾನಿ ಉಸಿರಾಡುವ ಎಲ್ಲಾ ಕ್ಯಾನ್ಸರ್ ಜನಕಗಳನ್ನು ನಾವೂ ಉಸಿರಾಡುತ್ತೇವೆ ಎಂದು ಜನರು ಅರಿತುಕೊಳ್ಳಬೇಕು. ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 30ರಷ್ಟು ಹೆಚ್ಚಿದರೆ, ಪರಿಧಮನಿಯ ಹೃದಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಶೇಕಡಾ 25ರಷ್ಟು ಹೆಚ್ಚಾಗುತ್ತದೆ ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞರು ಮತ್ತು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ ಡಾ. ವಿಶಾಲ್ ರಾವ್ ತಿಳಿಸಿದರು.
ಬಹುತೇಕ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಗೊತ್ತುಪಡಿಸಿದ ಧೂಮಪಾನ ಪ್ರದೇಶಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಹೇಳಿದ ಡಾ. ವಿಶಾಲ್ ರಾವ್, ಗೊತ್ತುಪಡಿಸಿದ ಧೂಮಪಾನ ಪ್ರದೇಶ ಎಂಬುದು ಅವೈಜ್ಞಾನಿಕವಾಗಿದ್ದು ಆ ವ್ಯವಸ್ಥೆಯನ್ನೇ ಕೈಬಿಡಬೇಕು ಎಂದು ಒತ್ತಿ ಹೇಳಿದರು. ಬಜೆಟ್ ನಲ್ಲಿ ತಂಬಾಕಿನ ಮೇಲಿನ ತೆರಿಗೆಗಳನ್ನು ಹೆಚ್ಚಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟ ಡಾ. ವಿಶಾಲ್ ರಾವ್, ಒಂದು ವೇಳೆ ತಂಬಾಕಿನ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದ್ದರೆ ಬಹುತೇಕ ಜನರಿಗೆ ತಂಬಾಕನ್ನು ಕೈಗೆಟುಕದಂತೆ ಮಾಡಬಹುದಿತ್ತು ಮತ್ತು ಕೋವಿಡ್ ನಿಂದಾಗಿ ಕುಸಿದುಬಿದ್ದಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚು ಆದಾಯ ಸಂಗ್ರಹಿಸಲು ಸಹಾಯವಾಗುತ್ತಿತ್ತು ಎಂದರು.