ಶಿವಮೊಗ್ಗ ಸ್ಫೋಟ ಪ್ರಕರಣ: ಸ್ಫೋಟಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸೇರಿ ನಾಲ್ವರ ಬಂಧನ
ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸೇರಿ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
Published: 07th February 2021 08:17 AM | Last Updated: 07th February 2021 08:17 AM | A+A A-

ಸಂಗ್ರಹ ಚಿತ್ರ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸೇರಿ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಸ್ಫೋಟಕ ಸರಬರಾಜು ಮಾಡುತ್ತಿದ್ದ ಆಂಧ್ರಪ್ರದೇಶದ ಅನಂತಪುರ ಮೂಲದ ಪಿ.ಶ್ರೀರಾಮುಲು (68), ಈತನ ಪುತ್ರ ಪಿ.ಮಂಜುನಾಥ ಸಾಯಿ (76), ಶಂಕರಗೌಡ ಕುಲಕರ್ಮಿ, ಈತನ ಪುತ್ರ ಅವಿನಾಶ್ ಕುಲಕರ್ಣಿ (43) ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಶಿವಮೊಗ್ಗ ಎಸ್'ಪಿ ಕೆ.ಎಂ.ಶಾಂತರಾಜು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಲಾಗಿತ್ತು. ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ಮತ್ತು ಸೊರಬ ಪೊಲೀಸ್ ಠಾಣೆಯ ಸಿಪಿಐ ಮರುಳಸಿದ್ದಪ್ಪ ನೇತೃತ್ವದಲ್ಲಿ ಒಂದು ತಂಡ ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿತ್ತು.
ಬಂಧನಕ್ಕೊಳಗಾಗಿರುವ ಶ್ರೀರಾಮುಲು ಅವರು ಆಂಧ್ರಪ್ರದೇಶದ ರಾಯದುರ್ಗದಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ದಾಸ್ತಾನು ಮಾಡಲು ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಶಿವಮೊಗ್ಗ ಜಿಲ್ಲೆಗೆ ಅನುಮತಿ ಇಲ್ಲದ ವಾಹನದಲ್ಲಿ ಸ್ಫೋಟಕ ವಸ್ತುಗಳನ್ನು ಕಳುಹಿಸಿದ್ದಾರೆ. ಈ ಸಂಬಂಧ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸಂಬಂಧಪಟ್ಟಂತಹ ಪೊಲೀಸರು ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.
ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೋಮಾಳ್ ಹಾಗೂ ಸಿಪಿಐ ಸಂಜೀವ್ ಕುಮಾರ್ ನೇತೃತ್ವದ ಮತ್ತೊಂದು ತಂಡ ಅನಂತಪುರ, ರಾಯದುರ್ಗಕ್ಕೆ ತೆರಳಿತ್ತು. ಬಳಿಕ ಶ್ರೀರಾಮುಲು ಹಾಗೂ ಮಂಜುನಾಥ್ ಇಬ್ಬರೂ ಹೈದರಾಬಾದ್ ನಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ ಹೈದರಾಬಾದ್'ಗೆ ತೆರಳಿತ್ತು ಎಂದಿದ್ದಾರೆ.
ಮೃತ ವ್ಯಕ್ತಿಗಳ ದೇಹ ಛಿದ್ರ ಛಿದ್ರವಾಗಿದ್ದರಿಂದಾಗಿ ಮೃತರ ಗುರುತು ಪತ್ತೆ ಮಾಡುವುದು ಅತ್ಯಂತ ಕಷ್ಟಕರವಾಗಿದೆ. ಈಗಾಗಲೇ 52 ಜನರ ಡಿಎನ್ಎ ಪಡೆಯಲಾಗಿದ್ದು, ಮಾದರಿಗಳನ್ನು ಎಫ್ಎಸ್ಎಲ್'ಗೆ ಕಳುಹಿಸಲಾಗುತ್ತದೆ. ಪತ್ತೆಯಾಗಿದ್ದ 10 ಮೃತದೇಹಗಳ ತುಂಡುಗಳನ್ನು ಪ್ರತ್ಯೇಕವಾಗಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಸ್ಫೋಟ ಸಂಭವಿಸಿದ ದಿನದಿಂದಲೂ 3-4 ಜನರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.