ಯುವ ಕಾಂಗ್ರೆಸ್ ಘಟಕದ ಚುನಾವಣೆ: ಗೊಂದಲಗಳ ಪರಿಹಾರಕ್ಕಾಗಿ ವರಿಷ್ಠರ ಮೊರೆ ಹೋದ ರಕ್ಷಾ ರಾಮಯ್ಯ
ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸುವ ಕುರಿತಂತೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಂಗಳವಾರ ಬೆಳಿಗ್ಗೆ ದೆಹಲಿಗೆ ತೆರಳಿದರು.
Published: 09th February 2021 05:19 PM | Last Updated: 09th February 2021 05:20 PM | A+A A-

ರಕ್ಷಾ ರಾಮಯ್ಯ
ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸುವ ಕುರಿತಂತೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಂಗಳವಾರ ಬೆಳಿಗ್ಗೆ ದೆಹಲಿಗೆ ತೆರಳಿದರು.
ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿ ಗೆದ್ದ 120 ಕ್ಕೂ ಹೆಚ್ಚು ಮಂದಿ ಬಳಿಕ ಪರಾಭಗೊಂಡಿದ್ದು ಈ ಬೆಳವಣಿಗೆ ಯುವ ಘಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ನ್ಯಾಯ ಒದಗಿಸುವಂತೆ ಗೆದ್ದು ಸೋತವರು ಒತ್ತಡ ಹೇರಿದ್ದಾರೆ. ಹೀಗಾಗಿ ಗೊಂದಲಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ರಕ್ಷಾ ರಾಮಯ್ಯ ದೆಹಲಿಗೆ ಹೋಗಿದ್ದಾರೆ.
ಬುಧವಾರ ಸಂಸತ್ ಘೇರಾವ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸುಮಾರು ಐದರಿಂದ ಆರು ಸಾವಿರ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ದೆಹಲಿಗೆ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬೆಂಬಲಿರ ಒತ್ತಾಸೆಯಂತೆ ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಉಂಟಾಗಿರುವ ಗೊಂದಲ ಮತ್ತು ಅಸಮಾಧಾನ ಬಗೆಹರಿಸುವಂತೆ ರಕ್ಷಾ ರಾಮಯ್ಯ ವರಿಷ್ಠರಿಗೆ ಮನವಿ ಮಾಡಲಿದ್ದಾರೆ.
ಚುನಾವಣಾ ಫಲಿತಾಂಶದ ಗೊಂದಲಗಳಿಗೆ ತಕ್ಷಣವೇ ಪರಿಹಾರ ಒದಗಿಸುವಂತೆ ಪರಾಜಿತ 120 ಮಂದಿ ಬ್ಲಾಕ್ ಕಾಂಗ್ರೆಸ್ ಘಟಕದ ಮುಖಂಡರು ಒತ್ತಡ ಹೇರಿದ್ದಾರೆ.
ಪರಾಜಿತರಾಗಿರುವವರು ಕಳೆದ ಮೂರ್ನಾಲ್ಕು ದಿನಗಳಿಂದ ತಂಡೋಪತಂಡವಾಗಿ ಆಗಮಿಸಿ ಈ ಎಲ್ಲಾ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತಂದು ಸಮಸ್ಯೆಗಳಿಗೆ ಶೀಘ್ರ ತೆರೆ ಎಳೆಯುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಾ ರಾಮಯ್ಯ ಅವರು ಮೂರು ದಿನಗಳ ಕಾಲ ದೆಹಲಿಯಲ್ಲಿದ್ದು, ಗೊಂದಲಗಳನ್ನು ಪರಿಹರಿಸಿಕೊಳ್ಳಲು ಉದ್ದೇಶಿಸಿದ್ದಾರೆ.