18 ಸಾವಿರ ಕೋಟಿ ಅದಿರು ನಿಧಿ ಬಳಸಲು ಕಾನೂನಿನ ನೆರವು ಕೋರಿದ ಸಚಿವ ಮುರುಗೇಶ್ ನಿರಾಣಿ

ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಳೆದ ಆರು ವರ್ಷಗಳಿಂದ ಕಬ್ಬಿಣದ ಅದಿರು ಗಣಿ ಕಂಪನಿಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡುವ ನಿಟ್ಟಿನಲ್ಲಿ ಕಾನೂನು...

Published: 13th February 2021 07:08 PM  |   Last Updated: 13th February 2021 07:08 PM   |  A+A-


Minister Murugesh Nirani

ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ

Posted By : Lingaraj Badiger
Source : UNI

ನವದೆಹಲಿ: ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಳೆದ ಆರು ವರ್ಷಗಳಿಂದ ಕಬ್ಬಿಣದ ಅದಿರು ಗಣಿ ಕಂಪನಿಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡುವ ನಿಟ್ಟಿನಲ್ಲಿ ಕಾನೂನು ಮತ್ತು ಆಡಳಿತಾತ್ಮಕ ನೆರವು ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಈ ಸಂಬಂಧ ಭೇಟಿ ಮಾಡಿದ ಅವರು, ಅಧಿಕೃತವಾಗಿ ರಾಜ್ಯದ ಪರವಾಗಿ ಮನವಿಪತ್ರ ಸಲ್ಲಿಸಿದರು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿರುವವರಿಂದ ದಂಡ ಮತ್ತು ಸುಂಕದ (ಲೆವಿ) ರೂಪದಲ್ಲಿ ಸುಮಾರು 18,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಆ ಹಣವನ್ನು ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರೂಪು ರೇಷೆಯನ್ನು ಸಿದ್ಧಪಡಿಸುವ ಕುರಿತಂತೆ ಪ್ರಹ್ಲಾದ್ ಜೋಶಿ ಅವರ ಜೊತೆ ಸಮಗ್ರವಾಗಿ ಚರ್ಚಿಸಿದರು.

ನಿಧಿ ಬಳಕೆಗೆ ನ್ಯಾಯಾಲಯವು ಅನುಮತಿ ನೀಡಿದರೆ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ ಮತ್ತು ತುಮಕೂರು ಸೇರಿದಂತೆ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಈ ಭಾಗದ ಜನರಿಗೆ ಪುನರ್ವಸತಿಗೆ ಅವಕಾಶ ನೀಡುವ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ಸಚಿವ ನಿರಾಣಿ ತಂದರು.

ಈಗಾಗಲೇ ಒಡಿಶಾದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಿದ ಕಂಪೆನಿಗಳನ್ನು ಆಯಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರ ಅಗತ್ಯತೆಗಳನ್ನು ಕಲ್ಪಿಸಿಕೊಡಲು ಅನುಮತಿ ನೀಡಿತ್ತು. ನಮ್ಮ ರಾಜ್ಯದ ಒಂದು ಪ್ರಕರಣದಲ್ಲಿ ಇದೇ ರೀತಿಯ ಆದೇಶ ಬಂದಿತ್ತು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಪ್ರಸ್ತುತ ನ್ಯಾಯಾಲಯದ ಅಧೀನದಲ್ಲಿರುವ ₹18 ಸಾವಿರ ಕೋಟಿ ಹಾಗೂ ಮುಂದೆ ಸಂಗ್ರಹವಾಗಲಿರುವ ರಾಜಧನ ಸೇರಿದಂತೆ ಒಟ್ಟು ₹25 ಸಾವಿರ ಕೋಟಿ ರೂ. ಕ್ರಿಯಾ ಯೋಜನೆಯನ್ನು ಇಲಾಖೆ ಸಿದ್ಧಪಡಿಸಿದೆ ಎಂಬುದನ್ನು ತಿಳಿಸಿದರು.
ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ₹2,200 ಕೋಟಿ ಸಂಗ್ರಹವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗುತ್ತಾರೆ. ಈ ಹಣದಿಂದಲೂ ನಾವು ವಿವಿಧ ರೀತಿಯ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ ನಮಗೆ ಅಗತ್ಯವಾದ ನೆರವು ನೀಡಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದ ಸಚಿವ ಮುರುಗೇಶ್ ನಿರಾಣಿ ಅವರು ಔಪಚಾರಿಕವಾಗಿ ಚರ್ಚೆ ಮಾಡಿದ್ದರು.

ಭೇಟಿಯ ಸಂದರ್ಭದಲ್ಲಿ ಸಚಿವ ನಿರಾಣಿ ಅವರು ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಣಿಗಾರಿಕೆ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಮೈಸೂರು ಮಿನರಲ್ಸ್ ಲಿಮಿಟೆಡ್‍ ಎಂಬ ಸಂಸ್ಥೆಯ ಹೆಸರನ್ನು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಎಂದು ಬದಲಾಯಿಸುವ ಪ್ರಸ್ತಾವನೆಯೂ ಸೇರಿದಂತೆ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಪಡುವರಿ, ಯಡಿಟರೆ ಮತ್ತು ಬೈಂದೂರುಗಳಲ್ಲಿ ಬಾಕ್ಸೈಟ್ ಖನಿಜಕ್ಕಾಗಿ 120.60 ಹೆಕ್ಟೇರ್ ಪ್ರದೇಶವನ್ನು ಕಾಯ್ದಿರಿಸಲಾಗಿದೆ. 
ಕುಂದಾಪುರ ತಾಲ್ಲೂಕಿನ ಪಡುವರೆ ಗ್ರಾಮದಲ್ಲಿ 23.80 ಹೆಕ್ಟೇರ್ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಈ ಪ್ರಸ್ತಾಪವು ಕೇಂದ್ರದ ಮುಂದೆ ಬಾಕಿ ಉಳಿದಿದೆ. ಉದ್ದೇಶಿತ ಕಾರ್ಯಯೋಜನೆ ಜಾರಿಗೊಳಿಸುವ ಅಗತ್ಯ ಇದೆ ಎಂಬುದನ್ನು ಸಚಿವರಾದ ಜೋಶಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಅಂತೆಯೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಗಣಿಗಾರಿಕೆಗಾಗಿ 145.00 ಹೆಕ್ಟೇರ್ ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆ ಕೂಡ ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(ಎಂಒಇಎಫ್ ಮತ್ತು ಸಿಸಿ)ದ ಮುಂದೆ ಬಾಕಿ ಇದೆ. ಈ ಬಗ್ಗೆ ಕರ್ನಾಟಕ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2020ರ ಮೇ ನಲ್ಲಿ ಅನುಮೋದನೆ ನೀಡುವ ಬಗ್ಗೆ ಕೋರಿತ್ತು. ಗಣಿಕಾರಿಕೆ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದರೆ ರಾಜ್ಯದ ವರಮಾನ ಹೆಚ್ಚಾಗಲಿದೆ ಎಂದು ಹೇಳಿದರು.

ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೆ ನೆರವು ಆಗುತ್ತದೆ ಈ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರದ ಪರವಾಗಿ ಕೇಂದ್ರ ಸಚಿವರಿಗೆ ನಿರಾಣಿ ಅವರು ವಿನಂತಿ ಮಾಡಿಕೊಂಡಿದ್ದಾರೆ.

ಸಚಿವ ನಿರಾಣಿಯವರ ಜೊತೆ ದೀರ್ಘ ಕಾಲ ಸಮಾಲೋಚನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಈ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದರು.

ರಾಜ್ಯದಲ್ಲಿ ಪ್ರಸ್ತಾವಿತ ಗಣಿಕಾರಿಕೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂಬ ಸಂಗತಿ ನನ್ನ ಗಮನಕ್ಕೂ ಬಂದಿದೆ. ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ಕಾನೂನಿನ ವ್ಯಾಪ್ತಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡುವುದಾಗಿ ಅಭಯ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ನಿರಾಣಿ, ರಾಜ್ಯ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವನೆಗಳನ್ನು ಅಧಿಕಾರಿಗಳ ಜೊತೆ ಚರ್ಚೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಭರವಸೆ ಸಿಕ್ಕಿದೆ. ನಮಗೆ ಕೇಂದ್ರ ಸರ್ಕಾರದಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp